ನಾನೇಕೆ ಜೈಲು ಖೈದಿಗಳ ಸಂಬಳ ಹೆಚ್ಚಿಸಿದೆ? ಕಾರಣ ನೀಡಿದ ಹೋಮ್ ಮಿನಿಸ್ಟರ್

ಜಾಹೀರಾತು/Advertisment
ಜಾಹೀರಾತು/Advertisment


ಜೈಲಿನಲ್ಲಿ ಖೈದಿಗಳ ದಿನ ಸಂಬಳವನ್ನು ಹೆಚ್ಚಿಸಿದ ಕುರಿತು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಜೈಲಿನಲ್ಲಿರುವ ಖೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು ಖೈದಿಗಳ ದಿನಗೂಲಿಯನ್ನ 525 ರೂಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಲಾಗಿತ್ತು.

ನಮ್ಮ ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಖೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲುವಾಸದಲ್ಲಿರುವ ಖೈದಿಗಳಿಗೆ ಕೂಲಿ ಹಣವನ್ನು 200 ರೂಗಳಿಂದ ಸ್ವಲ್ಪ ಹೆಚ್ಚಿಗೆ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆಯೇ ಹೊರತೂ ಅಂತಹ ಆದೇಶ ಇದುವರೆಗೂ ಹೊರಡಿಸಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಜೈಲುಶಿಕ್ಷೆಯಲ್ಲಿರುವ ಹಲವು ಖೈದಿಗಳಿಂದ ಪ್ರತಿದಿನ ಕೆಲಸಕಾರ್ಯಗಳನ್ನು, ದುಡಿಮೆ ಮಾಡಿಸಲಾಗುತ್ತಿದ್ದು ಪ್ರತಿಯೊಬ್ಬ ಕೈದಿಯೂ ಕೆಲಸ ಮಾಡಬೇಕಾಗುತ್ತದೆ.
ವಿವಿಧ ಕೆಲಸಗಳ ಮೂಲಕ ಖೈದಿಗಳ ಖಿನ್ನತೆಯನ್ನು ಹೋಗಲಾಡಿಸಿ ಅವರ ಮನಃಪರಿವರ್ತನೆ ಮಾಡುವುದು ಇದರ ಉದ್ದೇಶ. ಖೈದಿಗಳಿಗೆ ಕೈಮಗ್ಗ, ಕರಕುಶಲ ವಸ್ತುಗಳ ತಯಾರಿಕೆ , ಸೋಪ್ , ಮೇಣದಬತ್ತಿ ತಯಾರಿಕೆ ಸೇರಿದಂತೆ ಇಲಾಖೆಗೆ ಸೇರಿದ ಕೃಷಿ ಜಮೀನಿನಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಮಾರಾಟ ಮಾಡಲಾಗುತ್ತದೆ. ಈ ಮೂಲಕ  ಇಲಾಖೆಗೆ  ಆದಾಯವೂ ಬರುತ್ತಿದೆ. ಆದರೆ ಶಿಕ್ಷೆಯಲ್ಲಿರುವ ಖೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂಗಳು. ಅದರಲ್ಲಿ ಊಟದ ಖರ್ಚು 100 ರೂಗಳನ್ನು ಸಹಾ ಕಳೆಯಲಾಗುತ್ತಿದೆ. ಖೈದಿಯಾದ ಮಾತ್ರಕ್ಕೆ ಆತನಿಂದ ಜೀತ ಮಾಡಿಸಿಕೊಳ್ಳುವ ಹಕ್ಕು ಯಾವ  ಸರಕಾರಕ್ಕೂ ಇಲ್ಲ ಈ ಕಾರಣದಿಂದಾಗಿ ಅವರಿಂದಲೇ ಬರುತ್ತಿರುವ ಲಾಭ ಬಳಸಿ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದೆ ಅಷ್ಟೇ. ಕಾರಾಗೃಹವಾಸಿಗಳಲ್ಲಿ 50% ಗಿಂತಲೂ ಹೆಚ್ಚು ಅನಕ್ಷರಸ್ಥರೇ ಇದ್ದು ಈಗಾಗಲೇ ನಾನು ಗೃಹಸಚಿವನಾದ ಬಳಿಕ ಅವರಿಗೆಲ್ಲಾ ಅಕ್ಷರಾಭ್ಯಾಸ ನಡೆಸುವ ಯೋಜನೆಗೆ ಒತ್ತುಕೊಟ್ಟಿದ್ದು ಈಗಾಗಲೇ ಬಹಳಷ್ಟು ಪ್ರಗತಿ ಕಂಡುಬಂದಿದೆ.

ಸೆರೆವಾಸ ಮುಗಿಸಿ ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಬದುಕಬೇಕಾದ ಒಬ್ಬ ವ್ಯಕ್ತಿ ಬರಿಗೈಯಲ್ಲಿ ಮನೆಗೆ ಹೋದರೆ ಆತನ ಜೀವನ ಕಷ್ಟ. ತನ್ನ ಜೀವನಕ್ಕೆ ಏನೂ ಆಧಾರ, ಆದಾಯ ಇಲ್ಲದೇ ಸಮಾಜದ ದೃಷ್ಠಿಯಲ್ಲಿ ಅಸ್ಪೃಶ್ಯರಂತಾಗುವ    ಆತ ಮತ್ತೆ ತನ್ನ ಜೀವನ ನಡೆಸಲು ಕೆಟ್ಟ ದಾರಿಯನ್ನೇ ಆರಿಸಿಕೊಳ್ಳುವ ಸಂಭವ ಇರುತ್ತದೆ. ಖೈದಿಗಳ ಕೂಲಿ ಏರಿಸಿದರೂ ಜೈಲಿನಿಂದ ಹೊರಬಂದ ನಂತರವೇ ಅವರಿಗೆ ಹಣ ನೀಡಲಾಗುತ್ತದೆ. ತಮ್ಮ ಕುಟುಂಬದ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ , ಸ್ವಂತ ಉದ್ಯೋಗಕ್ಕೆ ಇದು ಸಹಕಾರಿಯಾಗಲಿದೆ.

ಈ ಎಲ್ಲಾ ಮಾನವೀಯತೆಯ ದೃಷ್ಠಿಯಿಂದ ಖೈದಿಗಳಿಂದ ಬರುತ್ತಿರುವ ಆದಾಯದಿಂದಲೇ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದ್ದು ಇದರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಖೈದಿಗಳ ಕೂಲಿ ಹೆಚ್ಚಿಸುವ ಆದೇಶ ಇನ್ನೂ ಜಾರಿಯಾಗಿಲ್ಲ ಆದರೆ ಹೀಗೊಂದು ಸದುದ್ದೇಶದ ಆಲೋಚನೆ ಮಾಡಲಾಗಿದೆಯಷ್ಟೆ.ಆದರೆ ಹಲವರು ಊಹಾಪೋಹಗಳನ್ನು ನಂಬಿ  ಖೈದಿಗಳ ಸಂಬಳ ಶಿಕ್ಷಕರ ವೃತ್ತಿಗಿಂತಲೂ ಲೇಸು ಎಂದು ಎಲ್ಲೆಡೆ ಸುದ್ದಿ ಹರಡುತ್ತಿರುವುದು ತಿಳಿದುಬಂದಿದ್ದು ಈ ಬಗ್ಗೆ ಮೇಲಿನ ಸ್ಪಷ್ಟೀಕರಣ ನೀಡಬಯಸುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

Post a Comment

0 Comments