ಮೂಡುಬಿದಿರೆ : ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ಚತುಷ್ಪಥಗೊಳ್ಳಲಿರುವುದರಿಂದ ಕಾರ್ಕಳದ ಪುಲ್ಕೇರಿ ಮತ್ತು ಮೂಡುಬಿದಿರೆ ವಲಯದ ಸಾಣೂರು ವ್ಯಾಪ್ತಿಯ ಒಟ್ಟು ೮೭೮ ಮರಗಳನ್ನು ತೆರವುಗೊಳಿಸಲಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಗುರುವಾರ ಸಾರ್ವಜನಿಕರ ಸಲಹೆ, ಆಕ್ಷೇಪಣೆ ಸಲ್ಲಿಸುವ ಕುರಿತು ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭ ಪರಿಸರವಾದಿಗಳು ಮರ ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ ಸಾರ್ವಜನಿಕರು, ಜನಪ್ರತಿನಿಧಿಗಳು ಅಭಿವೃದ್ಧಿ ಅನಿವಾರ್ಯವಾಗಿದ್ದು ತೆರವುಗೊಳ್ಳಲಿರುವ ಮರಗಳಿಗಿಂತ ಹತ್ತು ಪಟ್ಟು ಹೆಚ್ಚು ಮರಗಳನ್ನು ಬೆಳೆಸುವಂತೆ ಸಲಹೆ ನೀಡಿದರು.
ಪರಿಸರವಾದಿ ಶ್ರೀಕುಮಾರ್ ನಕ್ರೆ ಮಾತನಾಡಿ ಕಾರ್ಕಳದಿಂದ ಮೂಡುಬಿದಿರೆವರೆಗೆ ವಾಹನ ದಟ್ಟನೆ ಇಲ್ಲ. ಮೂಡುಬಿದಿರೆಯಿಂದ ಮಂಗಳೂರಿಗೆ ಮಾತ್ರ ಇದೆ. ಸಾಣೂರಿನಲ್ಲಿ ರಸ್ತೆ ಅಗಲವಿದೆ. ಸ್ಥಾಪಿತ ಹಿತಾಸಕ್ತಿಯಿಂದ ಮರಗಳನ್ನು ಕಡಿಯಲು ಹೊರಡುತ್ತೇವೆ. ಮರವನ್ನು ನಾವು ಎಲ್ಲಿ ಕಡಿಯುತ್ತೇವೆಯೋ ಅದು ಆ ಪ್ರದೇಶದ ಮಾತ್ರ ಸಂಪತ್ತಲ್ಲ ಅದು ಜಗತ್ತಿನ ಸಂಪತ್ತು ಮತ್ತು ಅದು ಭರಿಸಲಾಗದ ಸಂಪತ್ತು. ಅಭಿವೃದ್ಧಿಯ ನೆಪದಲ್ಲಿ ನಮ್ಮ ರಸ್ತೆ ಯುರೋಪ್ ನಂತೆ ಆಗಬೇಕು, ಎಲ್ಲರತ್ರ ವಾಹನಗಳು ಇರಬೇಕು ಅದೇ ನಮ್ಮ ಅಭಿವೃದ್ಧಿ ಎಂಬ ನಿಲುವನ್ನು ಬಿಟ್ಟು ಬಿಡಬೇಕು. ಕಡಿಮೆ ಸಂಪನ್ಮೂಲವನ್ನು ಬಳಸಿ ನಾವು ಹೇಗೆ ಸುಸ್ಥಿರವಾಗಿ ಬೆನ್ನಾಗಿ ಬದುಕಬಹುದು ಎಂಬುದನ್ನು ಅರಿತುಕೊಳ್ಳುವುದು ಉತ್ತಮ. ಈಗಾಗಲೇ ಪರಿಸರದ ಸಂಕಟ ಆಗಿದೆ. ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿದರೆ ಉತ್ತಮ ಎಂಬ ಸಲಹೆಯನ್ನು ನೀಡಿದರು.
ಮಮತಾ ರೈ, ಚಿಕ್ಕಪ್ಪ ಶೆಟ್ಟಿ,ಮತ್ತಿತರರು ಮಾತನಾಡಿ ರಸ್ತೆ ಅಭಿವೃದ್ಧಿಯಿಂದ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟದ ಅಂಚಿನಲ್ಲಿರುವ ನೂರಾರು ವರ್ಷ ಹಳೆಯದಾದ ಮರಗಳು ಕಣ್ಮರೆಯಾಗಲಿವೆ. ಹೀಗಾಗಿ ರಸ್ತೆ ಅಗಲೀಕರಣ ಯೋಜನೆಯನ್ನು ಕೈಬಿಡಬೇಕು. ಅನಿವಾರ್ಯವೇ ಆದರೆ ನಗರ ಪ್ರದೇಶದಲ್ಲಿ ಮಾತ್ರ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಿದರು.
ಮರಗಳನ್ನು ಯಥಾಸ್ಥಿತಿಯಲ್ಲಿ ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ಸಲಹೆಯೂ ಕೇಳಿಬಂತು. ಸಾಣೂರು ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಮಾತನಾಡಿ ಸಾಣೂರು ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ಮರಗಳು ತೆರವುಗೊಳ್ಳಲಿರುವುದರಿಂದ ಆ ಗ್ರಾಮ ವ್ಯಾಪ್ತಿಯಲ್ಲಿಯೇ ಸಭೆಯನ್ನು ನಡೆಸಬೇಕು ಎಂದರು.
ಬೆಳುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷ ಸೋಮನಾಥ ಕೋಟ್ಯಾನ್ ಮಾತನಾಡಿ
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಕನಿಷ್ಠ ೧೫ ಸಾವಿರ ಗಿಡಗಳನ್ನು ಬೆಳೆಸಬೇಕು. ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಸಾಣೂರು ಗ್ರಾ.ಪಂ ಸದಸ್ಯ ಕರುಣಾಕರ ಕೋಟ್ಯಾನ್ ಸ್ಥಳೀಯರಾದ ಸಂತೋಷ್ ಮತ್ತಿತರರು ಮಾತನಾಡಿದರು. ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್, ಮೂಡುಬಿದಿರೆ ಉಪ ವಲಯಾರಣ್ಯಾಧಿಕಾರಿ ಮಂಜುನಾಥ್ ಗಾಣಿಗ, ಅಶ್ವಿತ್ ಗಟ್ಟಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅದಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕರಿಂದ ಲಿಖಿತ ಆಕ್ಷೇಪಗಳನ್ನು ಸ್ವೀಕರಿಸಲಾಯಿತು.
0 Comments