ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್ ವಿಭಾಗದ ವತಿಯಿಂದ ಒಂದು ದಿನದ `ಫ್ಯಾಷನ್ ಡಿಸೈನಿಂಗ್’ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫೆವಿಕ್ರಿಲ್ ಸಂಸ್ಥೆಯ ಪುಷ್ಪಾಂಜಲಿ ರಾವ್ ಮಾತನಾಡಿ, ಕಲೆ ಮತ್ತು ಕರಕುಶಲ ಕೌಶಲ್ಯಗಳು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ವಯಸ್ಕರಿಗೂ ಉಪಯುಕ್ತವಾಗಿದೆ. ಪ್ರತಿಯೊಂದು ಮಗುವಿನಲ್ಲಿ ಕಲೆ ಅಡಕವಾಗಿದೆ ಆದರೆ ಮಗು ಪ್ರಬುದ್ಧತೆಗೆ ಬಂದ ನಂತರ ತನ್ನಲ್ಲಿರುವ ಕೌಶಲ್ಯಗಳನ್ನು ಉಳಿಸಿಕೊಂಡು ಹೋಗುವುದೇ ಮುಂದಿರುವ ದೊಡ್ಡ ಸವಾಲು. ಸರಿಯಾದ ಮಾರ್ಗದರ್ಶನ ಹಾಗೂ ತರಬೇತಿಯ ಮೂಲಕ ಮಕ್ಕಳಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಬಹುದು ಎಂದರು.
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, `ಫ್ಯಾಶನ್ ಎಂಬುವುದು ಜೀವನದ ಅವಿಭಾಜ್ಯ ಅಂಗವಾಗಿದೆ ಇನ್ನೊಬ್ಬರನ್ನು ಅನುಕರಣೆ ಮಾಡುವುದು ಫ್ಯಾಶನ್ ಅಲ್ಲ ಬದಲಾಗಿ ಇರುವುದರಲ್ಲಿ ಹೊಸತನವನ್ನು ಸೃಷ್ಟಿಸುವುದು ನಿಜವಾದ ಫ್ಯಾಶನ್. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯ ಸಂಸ್ಕೃತಿಯತ್ತ ವಿದೇಶಿಗರು ಮನಸೋಲುತ್ತಿದ್ದಾರೆ ಆದರೆ ಭಾರತೀಯರು ವಿದೇಶಿ ಸಂಸ್ಕೃತಿಯತ್ತ ಮಾರುಹೋಗುತ್ತಿದ್ದಾರೆ. ಆನ್ಲೈನ್ ಖರೀದಿಗಳ ಭರಾಟೆಯಿಂದ ಅಂಗಡಿಗಳು ಮೂಲೆಗುಂಪಾಗಿವೆ. ಜಾಗತಿಕ ಮಟ್ಟದ ಯೋಚನೆಯಿಂದ ಸ್ಥಳೀಯ ಚಟುವಟಿಕೆಗಳನ್ನು ಮಾಡುವುದರಿಂದ ಗ್ರಾಮೀಣ ಸೊಗಡನ್ನು ಸೃಜನಾತ್ಮಕವಾಗಿ ಜಗತ್ತಿಗೆ ಪರಿಚಯಿಸಬಹುದು, ಪ್ರತಿಯೊಂದು ಕ್ಷೇತ್ರದಲ್ಲಿ ಸೃಜನಶೀಲತೆ ಅವಶ್ಯಕವಾಗಿದೆ ಎಂದರು. ನಂತರ ವಿದ್ಯಾರ್ಥಿಗಳು ನೃತ್ಯ, ಹಾಡುಗಾರಿಕೆ, ಹಾಗೂ ರ‍್ಯಾಂಪ್‌ವಾಕ್‌ನಂತಹ ಸಾಂಸ್ಕೃತಿಕ ಕರ‍್ಯಕ್ರಮವನ್ನು ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಮುಖ್ಯಸ್ಥೆ ಸವಿತಾ ಶ್ರೀನಿವಾಸ್, ಉಪನ್ಯಾಸಕಿ ಪದ್ಮಪ್ರಿಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿ, ಶರಧಿ ಸುಚೇಂದ್ರ ಕಾರ್ಯಕ್ರಮ ನಿರೂಪಿಸಿದರು.
0 Comments