ಬೆಂಗಳೂರು: ಉರ್ದು ಭಾಷೆ ಮಾತನಾಡಲು ಬರಲಿಲ್ಲ ಎಂಬ ಕಾರಣಕ್ಕಾಗಿ ಚಂದ್ರು ಎಂಬುವರನ್ನು ಕೊಲೆ ಮಾಡಿರುವುದರ ಹಿಂದೆ ಕೆಲವು ಸಮಾಜಘಾತುಕ ಶಕ್ತಿಗಳು ಕೈವಾಡವಿದ್ದು, ಕರ್ನಾಟಕವನ್ನು ಕಾಶ್ಮೀರ ಮಾಡಲು ಹೊರಟಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿ , ನಾವು ಯಾವ ದೇಶದಲ್ಲಿ ಇದ್ದೇವೆ ಎಂಬುದೇ ಅನುಮಾನವಾಗುತ್ತದೆ. ಉರ್ದು ಮಾತನಾಡಲಿಲ್ಲ ಎಂಬುದಕ್ಕೆ ಕೊಲೆ ಮಾಡುತ್ತಾರೆ ಎಂದರೆ ಇಂಥ ಮನಸ್ಥಿತಿಯವರನ್ನು ಏನು ಮಾಡಬೇಕೆಂದು ಪ್ರಶ್ನಿಸಿದರು. ಇದು ಭಾರತ. ಇದನ್ನು ಅಫ್ಘಾನಿಸ್ಥಾನ, ಪಾಕಿಸ್ತಾನ ಮಾಡಲು ಬಿಡುವುದಿಲ್ಲ. ನಿಮಗೆ ನಿಮ್ಮ ಭಾಷೆ ಮೇಲೆ ಅಭಿಮಾನವಿದ್ದರೆ ನಮಗೂ ಕೂಡ ನಮ್ಮ ಭಾಷೆ ಮೇಲೆ ಅಭಿಮಾನವಿದೆ. ನಿಮ್ಮ ಮತಾಂಧ ಶಕ್ತಿಯನ್ನು ಇಲ್ಲಿ ತೋರಿಸುವ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಚಂದ್ರು ದಲಿತ ಎಂಬ ಕಾರಣಕ್ಕಾಗಿ ಯಾವ ಬುದ್ದಿಜೀವಿಗಳು ಕೂಡ ಮಾತನಾಡುತ್ತಿಲ್ಲ. ಅದೇ ಬೇರೆ ಧರ್ಮದವರು ಸತ್ತಿದ್ದರೆ ಈ ಹೊತ್ತಿಗೆ ಬಂದು ಬೊಬ್ಬೆ ಹೊಡೆಯುತ್ತಿದ್ದರು. ಮೌನವಾಗಿರುವುದರ ಹಿಂದಿನ ಉದ್ದೇಶವೇನು ಎಂದು ತರಾಟೆಗೆ ತೆಗೆದುಕೊಂಡರು.
ಕನ್ನಡ ಮಾತಾಡಿದನೆಂದು ಚಂದ್ರು ಹತ್ಯೆಯಾಗಿದೆ. ವ್ಯಕ್ತಿಗತ ಆಧಾರದಲ್ಲಿ ನೋಡಬಾರದು. ಇದರ ಹಿಂದೆ ಪ್ರಚೋದನೆಕಾರಿಯಾದ ಅಂಶ ಇದೆ. ಇವತ್ತು ಗೋರಿಪಾಳ್ಯದಲ್ಲಿ ನಡೆದಿದೆ. ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು, ನಾಳೆ ದೇಶದಲ್ಲೂ ನಡಿಯಬಹುದು. ಇದನ್ನು ನಾನು ಖಂಡಿಸುತ್ತೇನೆ. ಇದರ ಬಗ್ಗೆ ಬುದ್ದಿಜೀವಿಗಳು ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸತ್ತವನು ಹಿಂದೂವಾದರೆ ಯಾರ ಕಣ್ಣಲ್ಲಿ ಕಣ್ಣೀರು ಬರುವುದಿಲ್ಲ. ಸತ್ತವರು ಹಿಂದೂ ಆಗಿದ್ದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ. ಅವರ ಆಷಾಡಭೂತಿ ತನಕ್ಕೆ ಧಿಕ್ಕಾರವಿದೆ. ಶಾದೀಭಾಗ್ಯ ಯೋಜನೆ ತಂದು ಸಮಾಜ ಹೊಡೆದಿದ್ದು ಇದೇ ಸಿದ್ದರಾಮಯ್ಯನವರು ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್ ಬಗ್ಗೆ ದನಿ ಎತ್ತಿದವರಿಗೆ ಪಾಠ ಹೇಳಬೇಕಿತ್ತು. ನಾವಂತೂ ಸಮವಸ್ತ್ರದ ಪರ ನಿಂತಿದ್ದೇವೆ. ಮತಕ್ಕಾಗಿ ಆಕರ್ಷಿತರಾಗಿರುವವರು ಕಾಂಗ್ರೆಸ್‌ನವರು ಎಂದು ಆರೋಪಿಸಿದರು.
ನಮಗೆ ಜಾತಿ -ಧರ್ಮ ಹೊಡೆಯುವ ಅವಶ್ಯಕತೆ ಇಲ್ಲ.
ಅವರು ಪ್ರಮಾಣಿಕರಾಗಿದ್ದರೆ ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದ್ದವರು ಯಾರು ಎಂದು ಹೇಳಲಿ.? ಎಲ್ಲ ವಕೀಲರು ಕಾಂಗ್ರೆಸ್ ಬೆಂಬಲಿತರೇ ಇದ್ದರು. ಕಾಂಗ್ರೆಸ್ ನಿಲುವು ಯಾವ ಕಡೆ ಎಂದು ಪ್ರಶ್ನೆಸಿದರು.
ಮುಸ್ಲಿಮರು ಮಾವು ತೆಗೆದುಕೊಳ್ಳದಂತೆ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ನಿಲುವನ್ನು ನಮ್ಮ ಪಕ್ಷ ಸಮರ್ಥಿಸಿಕೊಳ್ಳೋದಿಲ್ಲ ಎಂದು ಸ್ಪಷ್ಟಪಡಿಸಿದರು. ಎಚ್.ಡಿ.ಕುಮಾರಸ್ವಾಮಿ ಅವರು ಹಿಜಾಬ್, ಸಮವಸ್ತ್ರ ಬಗ್ಗೆ ತಮ್ಮ
ನಿಲುವು ಮೊದಲು ಸ್ಪಷ್ಟ ಪಡಿಸಲಿ. ಅವರು ಟೀಕೆ ಮಾಡಲೇಬೇಕು. ಅವರಿಗೆ ಹೊಗಳುವ ಔದಾರ್ಯತೆ ಇಲ್ಲ. ಅವರ ವಿರೋಧ ಪಕ್ಷದ ಸ್ಥಾನಕ್ಕೆ ಧಕ್ಕೆ ಬರುತ್ತದೆ. ಯೂನಿಫಾರಂ ವಿರುದ್ಧ ಹಿಜಾಬ್ ತಂದವರಿಗೆ ಅವರು ಪಾಠ ಹೇಳಬೇಕಿತ್ತು ಎಂದು ತಿರುಗೇಟು ನೀಡಿದರು.
ಧ್ವನಿವರ್ಧಕಗಳ ಶಬ್ದದ ಪ್ರಮಾಣ ಬಗ್ಗೆ ಕೋರ್ಟ್ ಆದೇಶಗಳಿವೆ. ಅದನ್ನು ಎಲ್ಲರೂ ಪಾಲಿಸಬೇಕು. ನಾವು ನ್ಯಾಯಾಲಯದ ಪರ, ಪರಿಸರ ಇಲಾಖೆಯ ಪರವಾಗಿದ್ದೇವೆ. ನಾನು ಈ ವಿಷಯದಲ್ಲಿ ಮಸೀದಿ ವಿರುದ್ಧವಾಗಲೀ, ದೇವಸ್ಥಾನಗಳ ಪರವಾಗಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
0 Comments