ಉಡುಪಿ: ಈ ವರ್ಷ ನೇಕಾರರ ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಉಡುಪಿಯ ಶ್ರೀ ಕ್ಷೇತ್ರ ಉಚ್ಚಿಲ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗರಿಕಾ ದೋಣಿಗಳನ್ನು ನೀಡಲಾಗುತ್ತದೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮೀನುಗಾರರಿಗೆ 5000 ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗುವುದು. ಮೀನುಗಾರರ 8 ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸ ಮಾಡಲಾಗುವುದು. ಪ್ರತಿ ಗ್ರಾ.ಪಂ. ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನಿನ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಸ್ತ್ರೀಶಕ್ತಿ ಸಂಘಗಳ ಸಾಲಗಳ ಮರುಪಾವತಿ ಶೇ.95 ರಷ್ಟಿದೆ. ಇದು ಮಹಿಳೆಯರ ಪರಿಶ್ರಮ ಹಾಗೂ ಪ್ರಮಾಣಿಕತೆಯನ್ನು ತೋರಿಸುತ್ತದೆ. 500 ಕೋಟಿ ರೂ. ವೆಚ್ಚದಲ್ಲಿ ಆ್ಯಂಕರ್ ಬ್ಯಾಂಕ್ ಜೋಡಿಸಿ ಸ್ತ್ರೀ ಶಕ್ತಿ ಸಂಘಗಳಿಗೆ 1.5 ಲಕ್ಷ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗುತ್ತದೆ. ಇದರಿಂದ ಸುಮಾರು 4ಲಕ್ಷ ಮಹಿಳೆಯರಿಗೆ ಸಹಾಯವಾಗುತ್ತದೆ. ಕೇವಲ ಜೀವನೋಪಾಯಕ್ಕಾಗಿ ಅಲ್ಲ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ಮಹಿಳಾ ಸಬಲೀಕರಣದ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದರು.
ಮೀನುಗಾರರಿಗೆ 10 ತಿಂಗಳ ಡೀಸೆಲ್ ಸಬ್ಸಿಡಿ ಸೌಲಭ್ಯ :
100 ಡಾ. ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ಗಳು ಹಾಗೂ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 1000 ಹಾಸ್ಟೆಲ್‍ಗಳ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತದೆ. ಮೊಗವೀರ ಸಮುದಾಯದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ, ಮೀನುಗಾರರಿಗೆ 10 ತಿಂಗಳ ಡೀಸೆಲ್ ಸಬ್ಸಿಡಿ ಸೌಲಭ್ಯ, ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ 5 ಕೋಟಿ ರೂ.ಗಳನ್ನು ಮುಜರಾಯಿ ಇಲಾಖೆ ಮೂಲಕ ನೀಡಲಾಗುತ್ತದೆ ಎಂದರು.
ಈ ಸಂದರ್ಭ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು, ಮೀನುಗಾರಿಕಾ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ, ನಾಡೋಜ ಡಾ. ಜಿ ಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
0 Comments