ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆಯೇ ಭಾರತವು ಶ್ರೀಲಂಕಾಕ್ಕೆ ಹೆಚ್ಚು ಅಗತ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಸರಕುಗಳನ್ನು ಒದಗಿಸಿದೆ.
ಮೂಲಗಳ ಪ್ರಕಾರ ಭಾರತ ಸರ್ಕಾರ ಶ್ರೀಲಂಕಾಗೆ ಸುಮಾರು 76 ಸಾವಿರ ಟನ್ ಇಂಧನವನ್ನು ಪೂರೈಕೆ ಮಾಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 36,000 ಎಮ್.ಟಿ ಪೆಟ್ರೋಲ್ ಮತ್ತು 40,000 ಎಮ್.ಟಿ ಡೀಸೆಲ್ ಅನ್ನು ಶ್ರೀಲಂಕಾಕ್ಕೆ ತಲುಪಿಸಲಾಗಿದೆ. ಭಾರತ ನೆರವಿನ ಅಡಿಯಲ್ಲಿ ವಿವಿಧ ರೀತಿಯ ಇಂಧನದ ಒಟ್ಟು ಪೂರೈಕೆಯು ಈಗ 270,000 ಎಮ್.ಟಿಗಿಂತಲೂ ಹೆಚ್ಚಿದೆ ಎಂದು ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ನಲ್ಲಿ 'ನಾವು ಹೇಳಿದಂತೆ, ನೆರೆಹೊರೆಯವರು ಮೊದಲು ಎಂದು ಹೇಳಿದ್ದಾರೆ.
ಇಂಧನ ಮತ್ತು ಆಹಾರದ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತದಿಂದಾಗಿ ಶ್ರೀಲಂಕಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೇ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ನಿವಾಸಿಗಳು ಅನ್ನ ಮತ್ತು ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಬಂದೊದಗಿದೆ.
2009 ರಲ್ಲಿ ವಿನಾಶಕಾರಿ ಅಂತರ್ಯುದ್ಧದಿಂದ ಹೊರಹೊಮ್ಮಿದ ಶ್ರೀಲಂಕಾ ದೇಶವು 2019 ರಲ್ಲಿ ಇಸ್ಲಾಮಿಕ್ ಬಾಂಬ್ ದಾಳಿಯಿಂದ ತತ್ತರಿಸಿತ್ತು. ಬಳಿಕ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತನ್ನ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಾರಣಾಂತಿಕ ಘಾಸಿಯಾಗಿತ್ತು. ಇದು ಪ್ರವಾಸೋದ್ಯಮವನ್ನೇ ನಂಬಿದ್ದ ಶ್ರೀಲಂಕಾಗೆ ಮರ್ಮಾಘಾತ ನೀಡಿತ್ತು.
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ಪ್ರವಾಸೋದ್ಯಮಕ್ಕೆ ಹೊಸ ಹೊಡೆತವನ್ನು ನೀಡಿದೆ.
0 Comments