ಮೂಡುಬಿದಿರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ದಯಾವತಿ ಎಂ. ಇವರು ಮಾತನಾಡಿ, ಪ್ರತಿಯೊಂದು ಹೆಣ್ಣು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಕ್ಕೇರಿ ಸಾಧನೆಗಳನ್ನು ಮಾಡಬೇಕು. ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರನ್ನು ನಾವು ಕಾಣಬಹುದು. ಬಾಲ್ಯ ವಿವಾಹದಂತಹ ಕಾನೂನು ಬಾಹಿರ ಪದ್ಧತಿಗಳನ್ನು ತಡೆಹಿಡಿದು ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿ, ಮಹಿಳೆಯರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ೧೦೦ ಮಾನವ ದಿನ ಸೃಜನೆ ಮಾಡಿ ಸಾಧನೆಗೈದ ಇಬ್ಬರು ಮಹಿಳಾ ಫಲಾನುಭವಿಗಳಾದ ಗೀತಾಂಜಲಿ ಹಾಗೂ ನಿರ್ಮಲ ಜೈನ್ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಂಚರಿಸುವ ಮಾಹಿತಿ ರಥವನ್ನು ಸ್ವಾಗತಿಸಿ, ಪ್ರಮಾಣ ವಚನ ಸ್ವೀಕರಿಸಿ, ಬಳಿಕ ಸಹಿ ಆಂದೋಲನ ನಡೆಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ತಹಶೀಲ್ದಾರರಾದ ಪುಟ್ಟರಾಜು, ಕ್ಷೇತ್ರ ಆರೋಗ್ಯಾಧಿಕಾರಿ ಸುಶೀಲಾ, ಶಿಶು ಅಭಿವೃದ್ಧಿ ಯೋಜನೆ (ಗ್ರಾ) ಮೇಲ್ವಚಾರಕಿಯಾದ ಭಾರತಿ ಹಾಗೂ ತಾಲೂಕು ಐಇಸಿ ಅನ್ವಯ, ಎಂ ಐಎಸ್ ಸುಶ್ಮಿತಾ, ತಾಂತ್ರಿಕ ಸಂಯೋಜಕರಾದ ನಳೀನ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


0 Comments