ಬೆಂಗಳೂರು: ಪಾರಂಪರಿಕ ವೈದ್ಯರಿಗೆ ಕಾನೂನಿನ ಮಾನ್ಯತೆ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದನ್ನು ಮೀರಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಸಾಂಪ್ರಾದಾಯಿಕ ವೈದ್ಯ ಪದ್ಧತಿ ಅಧ್ಯನ ಮಾಡುವವರಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಮಂಡಿಸಿದ್ದ ಖಾಸಗಿ ನಿರ್ಣಯದ ಮೇಲೆ ಚರ್ಚೆಗೆ ಸಚಿವರು, ‘ಆಯುಷ್ ವೈದ್ಯ ಪದ್ಧತಿಗಳ ಕುರಿತು ಕೇಂದ್ರ ಸರ್ಕಾರವೇ ನೀತಿ ರೂಪಿಸಿದೆ. ರಾಜ್ಯದಲ್ಲಿ ಪ್ರತ್ಯೇಕ ನೀತಿ ರೂಪಿಸಲು ಅವಕಾಶವಿಲ್ಲ. ರಾಜ್ಯದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಾಂಪ್ರದಾಯಿಕವಾಗಿ ಆಯುರ್ವೇದವನ್ನು ಅಭ್ಯಾಸ ಮಾಡುತ್ತಿರುವವರು ಬಳ್ಳಾರಿ ಮತ್ತು ಬೆಂಗಳೂರಿನ ಆಯುರ್ವೇದ ವಿಶ್ವವಿದ್ಯಾಲಯಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು ಮತ್ತು ಅವರಿಗೆ ಸರ್ಕಾರ ಉಚಿತ ಸೀಟುಗಳನ್ನು ಕಾಯ್ದಿರಿಸಿದೆ ಎಂದು ಸುಧಾಕರ್ ಹೇಳಿದರು.
ದೇಸೀಯ ಪಾರಂಪರಿಕ ವೈದ್ಯರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕಾನೂನಿನ ವ್ಯಾಪ್ತಿಯಲ್ಲಿ ಮನ್ನಣೆ ನೀಡಬೇಕು. ಆಯುಷ್ ವೈದ್ಯರಿಗೂ ಹಲವು ಸಮಸ್ಯೆಗಳಿವೆ. ಅವುಗಳನ್ನೂ ಪರಿಹರಿಸಬೇಕು’ ಎಂದು ವೆಂಕಟೇಶ್ ಒತ್ತಾಯಿಸಿದರು.
'ಒಂದೇ ಸೂರಿನಡಿ ಆಯುಷ್ ವಿಭಾಗದ ಹಲವು ಸೇವೆಗಳನ್ನು ಒದಗಿಸಲು ಹಿಂದೆ ಅವಕಾಶವಿತ್ತು. ಆದರೆ, ಒಂದೇ ಸೇವೆ ಒದಗಿಸಬೇಕೆಂಬ ನಿರ್ಬಂಧ ವಿಧಿಸಿ 2018ರಲ್ಲಿ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದನ್ನು 2020ರಲ್ಲಿ ಹಿಂಪಡೆಯಲಾಗಿದೆ. ಕಾಯ್ದೆ ಹಿಂಪಡೆದು ಎರಡು ವರ್ಷಗಳಾದರೂ ಒಂದೇ ಸೂರಿನಡಿ ಆಯುಷ್ ವಿಭಾಗದ ವಿವಿಧ ಸೇವೆಗಳನ್ನು ಒದಗಿಸಲು ನೋಂದಣಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಆಯುಷ್ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವೆಂಕಟೇಶ್ ದೂರಿದರು.
ನೋಂದಣಿ ಸೇರಿದಂತೆ ಆಯುಷ್ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಒಂದು ತಿಂಗಳೊಳಗೆ ವರದಿ ಪಡೆದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಉತ್ತರಿಸಿದರು.
ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಶೂನ್ಯವೇಳೆಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ವಿಷಯವನ್ನು ಪ್ರಸ್ತಾಪಿಸಿದರು, ಉತ್ತರ ಪ್ರದೇಶದ ಮಾದರಿಯಲ್ಲಿ ಎರಡು ಮಕ್ಕಳ ನೀತಿಯನ್ನು ಪ್ರಸ್ತಾಪಿಸಿ, ಸರ್ಕಾರವು ಜನಸಂಖ್ಯಾ ನೀತಿಯನ್ನು ಪರಿಚಯಿಸುವಂತೆ ಸಲಹೆ ನೀಡಿದರು.
0 Comments