ಮಂಗಳೂರು: ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ವಿರೋಧಿಸುವವರು ವಿರೋಧ ಮಾಡುತ್ತಾರೆ. ದೇಶಕ್ಕಾಗಿ ಕೆಲಸ ಮಾಡುವವರು ಕೆಲಸ ಮಾಡುತ್ತಾರೆ. ಸಾಮರಸ್ಯದ ಜೀವನ ಮಾಡಬೇಕೆಂದರೆ ಇಲ್ಲಿ ಬದುಕಿ. ಇಲ್ಲವಾದರೆ ಎಲ್ಲಿ ಬೇಕಾದರೂ ಹೋಗಿ ಬದುಕಿ. ನಮಗೆ ಯಾವುದೇ ಅಭ್ಯಂತರ ಇಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಬುಧವಾರ ನಡೆದ ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಈ ಭಾಷಣದಲ್ಲಿ ಕೋಮು ದ್ವೇಷ ಹರಡಿಸಿದ್ದೇನಾ? ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಕೋಮು ದ್ವೇಷನಾ? ಭಾರತದಲ್ಲಿ ಇರುವವರು ಭಾರತೀಯರು. ಹಿಂದೂಸ್ಥಾನಾದಲ್ಲಿ ಇರುವವರು ಹಿಂದೂಗಳು. ಇದರಲ್ಲಿ ಕೋಮುದ್ವೇಷದ ಪ್ರಶ್ನೆಯೆ ಇಲ್ಲ ಎಂದರು.
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರ
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ತಂದಿರೋದೆ ಕಾಂಗ್ರೆಸ್. 2002ರಲ್ಲಿ ಎಸ್.ಎಂ ಕೃಷ್ಣ ಸರ್ಕಾರ ತಂದಿರೋದು. ಹಿಜಾಬ್ ಬಗ್ಗೆ ಸಂವಿಧಾನ ವಿರುದ್ಧ ಬಂದ್ ಮಾಡಿದ್ರಲ್ಲ. ನೀವು ಯಾಕೆ ಬಂದ್ ಮಾಡಿದ್ರಿ? ಮೆಡಿಕಲ್ ಅವಶ್ಯಕ ವಸ್ತುಗಳ ಅಂಗಡಿ ಬಂದ್ ಮಾಡಿದ್ರಲ್ಲ. ಅದು ಸಂವಿಧಾನಕ್ಕೆ ವಿರುದ್ಧ ಅಲ್ವಾ? ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಕೊಡುವುದಿಲ್ಲ. 100ಮೀ ವ್ಯಾಪ್ತಿಯೊಳಗೆ ಮುಸ್ಲಿಂರಿಗೆ ವ್ಯಾಪಾರಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಹಲಾಲ್ ವಿವಾದ ವಿಚಾರ
ಹಿಂದೂಗಳಿಗೆ ಹಲಾಲ್ ವಿಚಾರ ಬೇಡ. ಹಿಂದೂಗಳು ಅಂತಹ ಮಾಂಸವನ್ನು ಸ್ವೀಕಾರ ಮಾಡುವುದಿಲ್ಲ. ಅರಬ್‌ನ ಚಿಂತನೆಯನ್ನು ಭಾರತಕ್ಕೆ ತರೋದು ಬೇಡ. ಅದು ಅರಬ್ ನಲ್ಲಿ ಇರಲಿ. ಆ ಚಿಂತನೆ ಬೇಕೆಂದರೆ ಅರಬ್‌ಗೆ ಹೋಗಲಿ. ಭಾರತದಲ್ಲಿ ಭಾರತದ ಚಿಂತನೆ ಮಾತ್ರ ಇರಲಿ. ನಮ್ಮ ಸಂಪ್ರದಾಯ ಉಳಿಸಬೇಕು. ಹಲಾಲ್‌ಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ಆಹ್ವಾನಕ್ಕೆ ಸಿಎಫ್‌ಐ ಕಾರ್ಯಕರ್ತರ ಆಕ್ರೋಶ
ವಿವಿಯ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಆಹ್ವಾನಕ್ಕೆ ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರು ಮಂಗಳೂರು ವಿವಿಗೆ ಮುತ್ತಿಗೆ ಹಾಕಿದರು. ಸಿಎಫ್‌ಐ ಕಾರ್ಯಕರ್ತರು ಪ್ರಭಾಕರ ಭಟ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಪೊಲೀಸರು ವಿವಿಯ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ತಡೆದರು. ಘಟನೆಯಲ್ಲಿ ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿದರು.
0 Comments