ಮೂಡುಬಿದಿರೆ: ಕಾಳಿಕಾಂಬಾ ದೇವಸ್ಥಾನದ ಧಾರ್ಮಿಕ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಸರ್ಕಾರವು ಸಣ್ಣಪುಟ್ಟ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಒದಗಿಸುತ್ತಿದೆ. ಆದರೆ ವಿಶ್ವಕರ್ಮ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ನ್ಯಾಯೋಚಿತ ಅನುದಾನ ಒದಗಿಸದೆ ಕಡೆಗಣಿಸಿದೆ. ಇದು ನೋವಿನ ಸಂಗತಿ. ಸರ್ಕಾರ ಸ್ಪಂದಿಸದಿದ್ದರೂ ಭಕ್ತರು ಸಂಘಟಿತವಾಗಿ ದೇವಳದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿ ಸಹಕರಿಸಬೇಕು ಎಂದು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವದಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಎಂ.ಸಿ.ಎಸ್ ಬ್ಯಾಂಕ್‌ನ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಮಾತನಾಡಿ ದೇವಳಗಳಿಗೆ ಭಕ್ತರೇ ಆಸ್ತಿ. ದೇವಳಗಳು ಆರ್ಥಿಕ ಕ್ರೋಢಿಕರಣಕ್ಕಿಂತ ಆಸ್ತಿಕರ ಕ್ರೋಢಿಕರಣಕ್ಕೆ ಆದ್ಯತೆ ನೀಡಬೇಕು ಎಂದರು. 

ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಮಾತನಾಡಿದರು. 

ಸನ್ಮಾನ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ, ನಿವೃತ್ತ ಅಧ್ಯಾಪಕ ಭಾಸ್ಕರ ಆಚಾರ್ಯ ಪಾಲ್ತಾಡಿ ಅವರನ್ನು ಸನ್ಮಾನಿಸಲಾಯಿತು. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಪಡೆದ ಚುಕ್ಕಿಚಿತ್ರ ಕಲಾವಿದ ಸೂರ್ಯ ಪುರೋಹಿತ್, ಮಹಿಳಾ ಉದ್ಯಮಿ, ಮೂಡುಬಿದಿರೆ ತ್ರಿಭುವನ್ ಜೇಸಿಸ್ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ತೋಡಾರು ಗ್ರಾಮ ಕೂಡುವಳಿಕೆ ಮೊಕ್ತೇಸರ ಸಂಜೀವ ಆಚಾರ್ಯ ಅವರಿಗೆ ಗೌರವಾರ್ಪಣೆ ನಡೆಯಿತು. ಶಿಸ್ತುಕಾಣಿಕೆ ಹಾಗೂ ಕಾಣಿಕೆ ಡಬ್ಬಿಗಳಲ್ಲಿ ಹೆಚ್ಚು ಧನ ಸಂಗ್ರಹಿಸಿದವರನ್ನು ಗೌರವಿಸಲಾಯಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಎನ್.ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಕಾರ್ಯಯೋಜನೆಗಳ ವಿವರ ನೀಡಿದರು. ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ತಾಕೋಡೆ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿ ಪ್ರಾಸ್ತಾವಿಕಾವಾಗಿ ಮಾತನಾಡಿದರು. ಧನಂಜಯ ಮೂಡುಬಿದಿರೆ ವಂದಿಸಿದರು. ಭಾಸ್ಕರ ಆಚಾರ್ಯ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವಕರ್ಮ ಸಂಸ್ಕೃತಿ ಸಾಹಿತ್ಯ ಪ್ರಸಾರ ಪ್ರತಿಷ್ಠಾನದ ವತಿಯಿಂದ ಶಿಲ್ಪ ವಿಜಯ ಯಕ್ಷಗಾನ ತಾಳಮದ್ದಲೆ ಹಾಗೂ ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ಕಾಪು ರಂಗತರAಗ ಕಲಾವಿದರಿಂದ ಅಧ್ಯಕ್ಷರೆ ತುಳು ಹಾಸ್ಯಮಯ ನಾಟಕ ನಡೆಯಿತು.

Post a Comment

0 Comments