ಪುರಸಭೆಯು ಕಲ್ಲಬೆಟ್ಟುವಿನಲ್ಲಿ ಸ್ಮಶಾನ, ಮೀನು ಮಾರಾಟ ಮಳಿಗೆ ನಿರ್ಮಿಸಲು ವಿಪಕ್ಷೀಯರಿಂದ ಆಕ್ಷೇಪ


ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಬಂಗಾಲಪದವಿನಲ್ಲಿ ಸ್ಮಶಾನ ನಿರ್ಮಾಣ, ಪ್ರಾಂತ್ಯ ಗ್ರಾಮದ ಮೆಸ್ಕಾಂ ಬಳಿ ನಿಯಮಾನುಸಾರ ತಾತ್ಕಾಲಿಕ ಮೀನು ಮಳಿಗೆ ನಿರ್ಮಿಸಲು ಪುರಸಭೆ ವಿಧಿಸಿದ ಶರ್ತಕ್ಕೆ ಅನುಗುಣವಾಗಿ ಸ್ಥಳ ಬಾಡಿಗೆ ಆಧಾರದಲ್ಲಿ ರಚನೆ, ತಾರತಮ್ಯ ಮಾಡದೆ ಎಲ್ಲಾ ವಾರ್ಡಿನ ಸದಸ್ಯರಿಗೂ ಸಮ ಪ್ರಮಾಣದಲ್ಲಿ ಕಾಮಗಾರಿ ಹಾಗೂ ಅನುದಾನ,  ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆಯುವವರ ವಿರುದ್ಧ ಕೇಸು  ಹಾಗೂ ಅನಧಿಕೃತವಾಗಿ ನೀರಿನ ಸಂಪರ್ಕವನ್ನು ಬಳಸುತ್ತಿರುವವರ ಸಂಪರ್ಕವನ್ನು ಮುಂದಿನ ತಿಂಗಳಿನಿಂದ ಕಡಿತಗೊಳಿಸಿಸುವ ಬಗ್ಗೆ ಪುರಸಭೆಯು ತೀರ್ಮಾಣ ಕೈಗೊಂಡಿದೆ. 

  ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭಾಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆದು ತೀರ್ಮಾನ ಕೈಗೊಂಡಿದೆ. ಆದರೆ ಕಲ್ಲಬೆಟ್ಟುವಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಶಾನಕ್ಕೆ ಕಂದಾಯ ಇಲಾಖೆಯು ಸರ್ವೆ ಮಾಡಿ ನಕ್ಷೆಯನ್ನು ಮಾಡಿದ್ದು ಅದರಲ್ಲಿ ಅಧ್ಯಕ್ಷರ ಅನುಮತಿ ಮೇರೆಯಂತೆ ಎಂದು ಸೂಚಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಮಾತನಾಡಿದ ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್ ಸ್ಮಶಾನ ನಿರ್ಮಾಣ ಮಾಡಲು ಹೊರಟಿರುವ ಪ್ರದೇಶದಲ್ಲಿ ಹಲವು ಮನೆಗಳಿವೆ ಇದರಿಂದಾಗಿ ಅಲ್ಲಿನ ಜನರು ಒಪ್ಪುತ್ತಿಲ್ಲ ಬೇರೆ ಕಡೆಯಲ್ಲಿ ನಿರ್ಮಿಸುವಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಸದಸ್ಯರಾದ ಕೊರಗಪ್ಪ ಮತ್ತು ಸುರೇಶ್ ಕೋಟ್ಯಾನ್ ಅವರು ಅಲ್ಲಿ ಎಸ್ ಸಿ, ಎಸ್‌ಟಿ ಸಮುದಾಯಕ್ಕೆ ಸೇರಿರುವ ಜನರ ವಸತಿಗಳಿವೆ ಅಲ್ಲದೆ ಪಕ್ಕದಲ್ಲಿಯೇ ನಾಗಬನವಿದೆ ಆದ್ದರಿಂದ ಇಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ತಮ್ಮ ೧೧ ಜನ ಸದಸ್ಯರ ಆಕ್ಷೇಪವಿದೆ ಎಂದು ಹೇಳಿದರು. ಕಳೆದ ೯೧-೯೨ನೇ ಇಸವಿಯಲ್ಲಿಯೇ ಅಲ್ಲಿ ಸ್ಮಶಾನಕ್ಕೆ ಜಾಗವನ್ನು ಗುರುತಿಸಲಾಗಿದ್ದು ಅಲ್ಲಿಯೇ ಸ್ಮಶಾನ ನಿರ್ಮಿಸುವುದಾಗಿ ಉಪಾಧ್ಯಕ್ಷೆ ಸುಜಾತ ಶಶಿಕಿರಣ್ ಪಟ್ಟು ಹಿಡಿದರು. ಜತೆಗೆ ಧ್ವನಿಗೂಡಿಸಿದ ದಿನೇಶ್ ಪೂಜಾರಿ ಎಲ್ಲಾ ಗ್ರಾಮಗಳಲ್ಲಿಯೂ ಹಿಂದೂ ರುದ್ರಭೂಮಿಗಳು ಆಗಬೇಕಾಗಿದೆ ಎಂದರು. ಸಿಕ್ಕಿದ ಜಾಗದಲ್ಲಿ ಹೆಣಗಳನ್ನು ದಫನ ಮಾಡುವುದಕ್ಕಿಂತ ಸ್ಮಶಾನ ನಿರ್ಮಿಸುವುದು ಸೂಕ್ತವೆಂದು ಅಧ್ಯಕ್ಷರು ಅಭಿಪ್ರಾಯಪಟ್ಟರು. 


  ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮೆಸ್ಕಾಂ ಬಳಿ ಮೀನು ಮಾರಾಟ ಮಳಿಗೆ ತೆರೆಯಲು ಜಾಗ ಮಂಜೂರುಗೊಳಿಸುವಂತೆ ವಿನಂತಿಸಿದಕ್ಕೆ ತಾತ್ಕಾಲಿಕ ನೆಲೆಯಲ್ಲಿ ಮಳಿಗೆ ನಿರ್ಮಿಸಲು ಸ್ಥಳ ಬಾಡಿಗೆ ಆಧಾರದಲ್ಲಿ ನೀಡುವ ಹಿಂದಿನ ಸಭೆಯ ನಿರ್ಣಯಕ್ಕೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಈ ಕುರಿತು ಆಡಳಿತ, ವಿಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಈ ಹಿಂದೆ ಅಲ್ಲಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ತೆರವುಗೊಳಿಸಲಾಗಿದೆ ಅಲ್ಲದೆ ತೆರವುಗೊಳಿಸಲು ಆಕ್ಷೇಪ ವ್ಯಕ್ತಪಡಿಸಿದವರಿಗೆ ಪುರಸಭೆಯು ಪೊಲೀಸರಿಂದ ಪೆಟ್ಟಿನ ರುಚಿಯನ್ನು ತೋರಿಸಿದೆ ಎಂದು ಸದಸ್ಯ ಸುರೇಶ್ ಪ್ರಭು ಸಭೆಯ ಗಮನಕ್ಕೆ ತಂದರು. ಸದರಿ ಸಂಸ್ಥೆಗೆ ಜಾಗ ಬಾಡಿಗೆಗೆ ನೀಡುವುದೇ ಹೊರತು ಖಾಸಗಿ ವ್ಯಕ್ತಿಗಳಿಗಲ್ಲ. ತಾತ್ಕಾಲಿಕ ನೆಲೆಯಲ್ಲಿ ಶರ್ತ ವಿಧಿಸಿ ನೀಡಲಾಗುವುದು ಎಂದು ಪ್ರಸಾದ್ ಕುಮಾರ್ ಸಮರ್ಥಿಸಿಕೊಂಡರು.

  ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನೀರಿನ ಸಂಪರ್ಕಗಳಿದ್ದು ಇದರಿಂದ ನೀರು ಪೋಲಾಗುವುದರೊಂದಿಗೆ ಪುರಸಭೆಗೆ ಆರ್ಥಿಕವಾಗಿಯೂ ನಷ್ಟವಾಗಲಿದೆ. ಎ.೧ರಿಂದ ಇಂತಹ ಅನಧಿಕೃತ ನೀರನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಅಶೋಕ್ ಸಭೆಯ ಗಮನಕ್ಕೆ ತಂದರು. ಅನಧಿಕೃತವಾಗಿದ್ದರೆ ಮಾತ್ರ ಕಡಿತಗೊಳಿಸಬೇಕು. ಎಸ್‌ಸಿ, ಎಸ್‌ಟಿ ಯವರಿಗೆ ಮತ್ತು ದೇವಸ್ಥಾನಗಳಿಗೆ ಉಚಿತವಾಗಿ ನೀಡಿರುವ ನೀರಿನ ಸಂಪರ್ಕವನ್ನು ಹೊರತು ಪಡಿಸಿ ಕಡಿತಗೊಳಿಸುವಂತೆ ಸದಸ್ಯರು ಸೂಚಿಸಿದರು. 

ನೀರಿನ ಬಿಲ್ ಸಂಗ್ರಾಹಕರ ಟೆಂಡರ್ ಮುಗಿದಿದ್ದರೂ ಅವರನ್ನು ಮುಂದುವರಿಸಿರುವ ಬಗ್ಗೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪ್ರಸಾದ್‌ಕುಮಾರ್ ಈ ಹಿಂದೆ ಒಂದು ಕೋಟಿಯಷ್ಟು ಬಿಲ್ ಕಲೆಕ್ಷನ್‌ಗೆ ಬಾಕಿಯಿತ್ತು. ಗುತ್ತಿಗೆದಾರರ ಟೆಂಡರ್ ಮುಗಿದಿದ್ದರೂ ಅವರು ಉತ್ತಮವಾಗಿ ಕರ‍್ಯನಿರ್ವಹಿಸುತ್ತಿದ್ದಾರೆ ಹೀಗಾಗಿ ಅವರನ್ನೇ ಮುಂದುವರಿಸಲಾಗಿದೆ ಎಂದರು.

ನೀರು ಬಿಡುವವರಿಗೆ ಗೌರವಧನ ಹೆಚ್ಚಿಸಬೇಕು ಎಂದು ಸದಸ್ಯ ಜೊಸ್ಸಿ ಮಿನೇಜಸ್ ಸಲಹೆ ನೀಡಿದರು. ಗೌರವಧನ ಹೆಚ್ಚಳಕ್ಕೂ ಮುನ್ನ ನೀರು ಸರಬರಾಜುದಾರರ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಯಿತು.

ನನಗೆ ಶುಭಾಶಯ ಕೋರಿದ ಫ್ಲೆಕ್ಸನ್ನು ಒಂದೇ ದಿನದಲ್ಲಿ ಪುರಸಭಾಧಿಕಾರಿಯವರು ತೆರವುಗೊಳಿಸಿದ್ದಾರೆ ಆದರೆ ಕಳೆದ ಒಂದು ತಿಂಗಳಿನಿಂದ ಮಸೀದಿ ರಸ್ತೆಯಲ್ಲಿ ಫುಟ್‌ಪಾತ್‌ನಲ್ಲಿ ಹಾಕಿದ ಫ್ಲೆಕ್ಸನ್ನು ತೆಗೆಯದೆ ತಾರತಮ್ಯವೆಸಗಿದ್ದಾರೆ ಎಂದು  ಫ್ಲೆಕ್ಸ್ ಇರುವ ಫೋಟೋ ಸಭೆಗೆ ತೋರಿಸಿ ಸದಸ್ಯ ಕೊರಗಪ್ಪ ಆಕ್ಷೇಪಿಸಿದರು. ಈ ಕುರಿತು ವಾದ ವಿವಾದ ನಡೆಯಿತು.

  ಕಸವನ್ನು ರಸ್ತೆ ಬದಿಗಳಲ್ಲಿ ಎಸೆಯುವವರ ವಿರುದ್ಧ ಕೇಸು ದಾಖಲಿಸಬೇಕು. ಯಾರು ಕಸವನ್ನು ರಸ್ತೆಗೆ ಎಸೆಯುತ್ತಾರೆ ಎಂಬುದನ್ನು ತಿಳಿಯಲು ಪ್ರಭಾವಶಾಲಿಯಾದ ಸಿಸಿ ಕೆಮರಾವನ್ನು ಅಳವಡಿಸುವಂತೆ ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು. 

ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ  ಸದಸ್ಯರಾದ  ಪಿ.ಕೆ.ಥೋಮಸ್, ರಾಜೇಶ್ ನಾಯ್ಕ್, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ರೂಪಾ ಶೆಟ್ಟಿ, , ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ಶ್ವೇತಾ ಕುಮಾರಿ  ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಇಂದು ಎಂ., ಆರೋಗ್ಯ ನಿರೀಕ್ಷ ರಾಜೇಶ್, ಪರಿಸರ ಅಭಿಯಂತರೆ ಶಿಲ್ಪಾ, ಮೆನೇಜರ್ ಗೋಪಾಲ್ ನಾಯ್ಕ್ ಉಪಸ್ಥಿತರಿದ್ದರು. 


Post a Comment

0 Comments