ಕೊಲ್ನಾಡು: ಮೂಲ್ಕಿ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಕೊಲ್ನಾಡು ಅನ್ನೋ ಪುಟ್ಟ ಊರು ರಾಜ್ಯಮಟ್ಟದ ಕೃಷಿ ಮೇಳಕ್ಕೆ ಮದುವಣಗಿತ್ತಿಯಂತೆ ಸಜ್ಜಾಗಿದೆ. ಮಾರ್ಚ್ 11ರಿಂದ 13ರವರೆಗೆ ಕೃಷಿ ಸಿರಿ-2022 ಜರುಗಲಿದ್ದು ತುಳುನಾಡಿನ ಆಚಾರ ವಿಚಾರ, ಕಲೆ, ಜಾನಪದ ಸಂಸ್ಕೃತಿ, ಕೃಷಿ ಬದುಕಿನ ಅಳಿವು ಉಳಿವಿನ ಬಗ್ಗೆ ಕೃಷಿ ಮೇಳ ಬೆಳಕು ಚೆಲ್ಲಲಿದೆ. ಮೂರು ದಿನಗಳ ಕಾಲ ಕೃಷಿ ಮತ್ತು ಕೃಷಿಕರ ಜೀವನದ ಕುರಿತು ಚರ್ಚೆ, ಗೋಷ್ಠಿ ಹಾಗೂ ಸಂವಾದಗಳು ಜರುಗಲಿದ್ದು ಇದಕ್ಕಾಗಿ ವಿಶಾಲ ಮೈದಾನದಲ್ಲಿ ಸಂಘಟಕರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.
*ಸಾಂಸ್ಕೃತಿಕ ಕಾರ್ಯಕ್ರಮ, ಭರಪೂರ ಮನೋರಂಜನೆ!*
ಕೃಷಿ ಮೇಳದಲ್ಲಿ ಕೃಷಿ ಕುರಿತ ಮಾಹಿತಿ, ಗೋಷ್ಠಿ, ಸಂವಾದದ ಜೊತೆಗೆ ಮೇಳಕ್ಕೆ ಬರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳು, ಮಹಿಳೆಯರಿಗೆ ಮನೋರಂಜನೆ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಳಿಗೆಗಳನ್ನು ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಚಿಣ್ಣರಿಗೆ ಮನೋರಂಜನೆಗಾಗಿ ಜಾಯಿಂಟ್ ವೀಲ್ ಮತ್ತಿತರ ಆಟದ ವ್ಯವಸ್ಥೆ, ಶುಚಿ ರುಚಿಯಾದ ಸಾಂಪ್ರದಾಯಿಕ ಆಹಾರ ಖಾದ್ಯಗಳ ಫುಡ್ ಕೌಂಟರ್, ಫಲಪುಷ್ಪ ಪ್ರದರ್ಶನ, ಔಷಧಿ ಗಿಡಗಳ ವನಸಿರಿ, ಸಾಂಪ್ರದಾಯಿಕ ಸೆಲ್ಫಿ ಕಾರ್ನರ್ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ತಂಡದಿಂದ "ಗೀತಾ ಸಾಹಿತ್ಯ ಸಂಭ್ರಮ", ಸಂಜೆ 4:30ರಿಂದ ರಿದಂ ಸುರತ್ಕಲ್ ತಂಡದಿಂದ "ರೈತರ ಅಳಿವು ಉಳಿವು", ಸಂಜೆ 7:30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ "ನೃತ್ಯ ವೈಭವ", ರಾತ್ರಿ 9:30ರಿಂದ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ "ತುಳುನಾಡ ಸಂಸ್ಕೃತಿ" ಕಾರ್ಯಕ್ರಮ ಜರುಗಲಿದೆ.
ಆರ್ಷಿಸುತ್ತಿರುವ "ಪಾರಂಪರಿಕ ಗ್ರಾಮ"!
ಕೃಷಿ ಮೇಳದಲ್ಲಿ ತುಳುನಾಡಿನ ಕೃಷಿ ಹಿನ್ನೆಲೆಯ ಜನರ ಬದುಕನ್ನು ಸಾದರಪಡಿಸುವ ಪಾರಂಪರಿಕ ಗ್ರಾಮ ಜನರನ್ನು ಆಕರ್ಷಿಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ಪಾರಂಪರಿಕ ಗ್ರಾಮದಲ್ಲಿ ಕೃಷಿಕರ ಮನೆಗಳು, ಪರಿಸರವನ್ನು ಕಲಾವಿದರ ಕೈಚಳಕದಲ್ಲಿ ಪಡಿಮೂಡಿಸಲಾಗಿದೆ.
*ಎಲ್ಲಿಂದ ಎಷ್ಟು ದೂರ?*
ರಾಜ್ಯಮಟ್ಟದ ಕೃಷಿ ಮೇಳ ನಡೆಯುವ ಕೊಲ್ನಾಡು ಮೂಲ್ಕಿ ಪಟ್ಟಣದಿಂದ 2.5 ಕಿ.ಮೀ. ದೂರದಲ್ಲಿದೆ. ಸುರತ್ಕಲ್ ನಿಂದ 13 ಕಿ. ಮೀ., ಮಂಗಳೂರಿನಿಂದ 24 ಕಿ. ಮೀ. ಹಾಗೂ ಉಡುಪಿಯಿಂದ 31 ಕಿ. ಮೀ. ದೂರದಲ್ಲಿದೆ. ಹತ್ತಿರದ ಪೇಟೆ ಮೂಲ್ಕಿ, ಹತ್ತಿರದ ರೈಲು ನಿಲ್ದಾಣ ಮೂಲ್ಕಿ ಹಾಗೂ ಎಕ್ಸ್ ಪ್ರೆಸ್ ಬಸ್ ನಿಲ್ದಾಣ ಕೊಲ್ನಾಡು ಕಾಲ್ನಡಿಗೆ ದೂರದಲ್ಲಿದೆ. ಕೊಲ್ನಾಡು ತಲುಪಲು ಮಂಗಳೂರು, ಉಡುಪಿ ಕಡೆಯಿಂದ ಸಾಕಷ್ಟು ಸಂಖ್ಯೆಯ ಖಾಸಗಿ ಸರ್ವಿಸ್ ಹಾಗೂ ಎಕ್ಸ್ ಪ್ರೆಸ್ ಬಸ್ ಸೇವೆ ಲಭ್ಯವಿದೆ.


0 Comments