ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಸಭೆ
ಮೂಡುಬಿದಿರೆ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ಕಂಬಳ ಸಮಿತಿಯ ಸಭೆಯು ಅಧ್ಯಕ್ಷ ಚಂದ್ರಹಾಸ ಸನಿಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಂಬಳದ ತೀರ್ಪುಗಾರರು, ವೀಕ್ಷಕ ವಿವರಣೆಗಾರರು ಸಮಿತಿಯ ಅಜೀವ ಸದಸ್ಯರಾಗಿರಬೇಕು. ಈ ಸದಸ್ಯತ್ವ ಇಲ್ಲದವರನ್ನು ಯಾವುದೇ ಕಂಬಳ ಸಮಿತಿಗಳು ತೀರ್ಪುಗಾರರನ್ನಾಗಿ ನಿಯೋಜಿಸಬಾರದು ಎಂದು ಜಿಲ್ಲಾ ಕಂಬಳ ಸಮಿತಿ ನಿರ್ಣಯ ಕೈಗೊಳ್ಳಲಾಯಿತು.
ಕೋಣಗಳ ಯಜಮಾನರು ಸದಸ್ಯತ್ವ ಪಡೆಯಲು ವಿನಂತಿಸಲಾಯಿತು. ಸರಕಾರದ ಮಾರ್ಗಸೂಚಿಯಂತೆ 150 ಜೊತೆ ಕೋಣಗಳಿರುವ ಕಂಬಳಗಳನ್ನು 24ಗಂಟೆಗಳೊಳಗೆ ಹಾಗೂ ಅದಕ್ಕಿಂತ ಹೆಚ್ಚು ಜೊತೆ ಭಾಗವಹಿಸುವ ಕಂಬಳಗಳ ಅವಧಿಯನ್ನು 30 ಗಂಟೆಗೂ ವಿಸ್ತರಿಸಲು ಅವಕಾಶವಿದ್ದು ಇದನ್ನು ಅನುಷ್ಟಾನಗೊಳಿಸಲು ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು ಸಹಕಾರ ನೀಡುವ ಕುರಿತು ಮನವಿ ಮಾಡಲಾಯಿತು.
ಕಂಬಳದ ವಿಳಂಬವನ್ನು ತಪ್ಪಿಸಲು ಗಂತಿನಲ್ಲಿ ಕೋಣಗಳನ್ನು ಬಿಡಲು ಗರಿಷ್ಠ 15 ನಿಮಿಷವನ್ನು ನಿಗದಿಪಡಿಸಲಾಯಿತು. ಹಾಗೂ ತೀರ್ಪುಗಾರರಿಗೆ ಸಂಭಾವನೆಯನ್ನು ಗೊತ್ತುಪಡಿಸಲಾಯಿತು. ಕಂಬಳದಲ್ಲಿ ಸಮಯ ವಿಳಂಬವಾಗುವುದನ್ನು ತಪ್ಪಿಸಲು ಪ್ರತೀ ಕಂಬಳದಲ್ಲಿ ಕೋಣಗಳ ಸಂಖ್ಯೆಯನ್ನು ಕಡಿಮೆ ಗೊಳಿಸುವ ಕುರಿತು ಚಿಂತಿಸಲಾಯಿತು.
ಮೈಸೂರು ದಸರಾ ಸಂದಭ೯ದಲ್ಲಿ ನಡೆದ ಕಂಬಳದಲ್ಲಾದ ಎಡವಟ್ಟುಗಳ ಬಗ್ಗೆ ಕಂಬಳದ ಕೋಣಗಳ ಯಜಮಾನರು ಅಸಮಾಧಾನ ವ್ಯಕ್ತ ಪಡಿಸಿದರು.
ಕಂಬಳದ ಯಜಮಾನರಿಗೆ ತೀರ್ಪುಗಾರರಿಗೆ, ಕಂಬಳದ ಹಿರಿಯರಿಗೆ, ಸಮಿತಿಯ ಸದಸ್ಯರಿಗೆ ಪ್ರವೇಶ ಪತ್ರ ಲಭಿಸದೆ ಪೊಲೀಸರು ಕಂಬಳಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಿಲ್ಲ. ಒಟ್ಟಿನಲ್ಲಿ ಇದು ಅಧಿಕಾರಿಗಳ ಕಂಬಳವಾದಂತಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಸರಕಾರದ ಮಟ್ಟದಲ್ಲಿ ನಡೆಯುವ ಕಂಬಳದಲ್ಲಿ ಸಮಿತಿ, ಅಸೋಸಿಯೇಷನ್ನ ಕ್ರಮದಂತೆ ಕಂಬಳ ನಡೆಯಬೇಕು. ಕಂಬಳಕ್ಕೆ ಸಂಬಂಧಪಟ್ಟವರಿಗೆ ಗೌರವ ಸಿಗದಿದ್ದರೆ, ಅಂತಹ ಕಂಬಳಗಳಿಗೆ ಸಹಕಾರ ನೀಡದಿರಲು ಸಭೆಯಲ್ಲಿ ಚಿಂತನೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಎಮಾ೯ಳ್ ರೋಹಿತ್ ಹೆಗ್ಡೆ, ಭಾಸ್ಕರ ಎಸ್. ಕೋಟ್ಯಾನ್, ಪಿ.ಆರ್. ಶೆಟ್ಟಿ, ಪ್ರಮುಖರಾದ ವಿಜಯಕುಮಾರ್ ಕಂಗಿನಮನೆ, ಲೋಕೇಶ್ ಶೆಟ್ಟಿ, ಪೊಡುಂಬ ಸಂದೀಪ್ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ರಶ್ಮಿತ್ ಶೆಟ್ಟಿ, ಗಿರೀಶ್ ಆಳ್ವ, ಅರುಣ್ ಶೆಟ್ಟಿ, ದೇವರಾಜ್ ಹೆಗ್ಡೆ, ಪಣಪಿಲ ಯುವರಾಜ್ ಜೈನ್, ಅಶ್ವಥ್ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು.

0 Comments