ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪೋಷಕರು, ಸರ್ಕಾರದ ಸಹಭಾಗಿತ್ವ ಅಗತ್ಯ: ಡಾ. ಸುಧಾರಾಣಿ

ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪೋಷಕರು, ಸರ್ಕಾರದ ಸಹಭಾಗಿತ್ವ ಅಗತ್ಯ: ಡಾ. ಸುಧಾರಾಣಿ

ಮೂಡುಬಿದಿರೆ: ಕನ್ನಡ ಭಾಷೆಯ ಉಳಿವಿನ ಬಗ್ಗೆ ಮಾತನಾಡುವುದರ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೂ ಸಮಾಜ ಕಾಳಜಿ ವಹಿಸಬೇಕು. ಆಂಗ್ಲ ಮಾಧ್ಯಮದ ಮೇಲಿನ ಹೆಚ್ಚುತ್ತಿರುವ ಒಲವಿನಿಂದ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದು, ಅವುಗಳ ಉಳಿವಿಗೆ ಪೋಷಕರು, ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸುಧಾರಾಣಿ ಹೇಳಿದರು.

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ‘ಕನ್ನಡ  ನುಡಿ ಹಬ್ಬ ಸಂಭ್ರಮ–2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ಆಧುನಿಕ ಜಗತ್ತಿನಲ್ಲಿ ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಮಾತೃಭಾಷೆಯನ್ನು ಮರೆಯಬಾರದು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದುವ, ಕನ್ನಡದಲ್ಲಿ ಮಾತನಾಡುವ ಹಾಗೂ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದ ಮೇಲಿನ ಅಭಿಮಾನ ಘೋಷಣೆಗಳಿಗೆ ಸೀಮಿತವಾಗದೆ ದೈನಂದಿನ ಬದುಕಿನಲ್ಲೂ ವ್ಯಕ್ತವಾಗಬೇಕು ಎಂದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ  ಪ್ರಶಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿಧಿ ಎಳಚಿತ್ತಾಯ  ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಆಚರಣೆಯ ಆಶಯವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಒಂದು ದಿನ ಕನ್ನಡದ ಬಾವುಟ, ಶಾಲು ಧರಿಸಿ ಸಂಭ್ರಮಿಸುವುದರಿಂದ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ದೈನಂದಿನ ಮಾತುಕತೆ, ಬರವಣಿಗೆ, ವ್ಯವಹಾರ ಹಾಗೂ ಶಿಕ್ಷಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


ಶ್ರೀನಿಧಿ ಸ್ವಾಗತಿಸಿದರು. ಶಂಕರ್ ಮತ್ತು ಸುಶ್ಮಿತಾ ನಿರೂಪಿಸಿದರು.ಶ್ರೇಯಸ್ ವಂದಿಸಿದರು.  

ಸಭಾ ಕರ‍್ಯಕ್ರಮದ ನಂತರ ಸಾಂಸ್ಕೃತಿಕ  ನಡೆಯಿತು.  ವಿವಿಧ  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ  ವಿತರಿಸಲಾಯಿತು.

Post a Comment

0 Comments

Advertisement