ಮೂಡುಬಿದಿರೆಯಲ್ಲಿ ನ. 23 ಹಾಗೂ 24ರಂದು ವಿಶೇಷ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ

ಮೂಡುಬಿದಿರೆಯಲ್ಲಿ ನ. 23 ಹಾಗೂ 24ರಂದು ವಿಶೇಷ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ
ಮೂಡುಬಿದಿರೆ: ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರು ಸಂಪರ್ಕಗೊಳಿಸುವ ಹಾಗೂ ಖಾದಿ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಮೂಡುಬಿದಿರೆಯಲ್ಲಿ ಇದೇ ನವೆಂಬರ್ 23 ಮತ್ತು 24ರಂದು ವಿಶೇಷ ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ರಾಜ್ಯ ಸರ್ಕಾರದ ಸುತ್ತೋಲೆಯಂತೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಅಧಿಕಾರಿಗಳು ಮತ್ತು ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಹಾಗೂ ಪ್ರಮುಖ ರಾಷ್ಟ್ರೀಯ ಹಬ್ಬಗಳಂದು ಖಾದಿ ಉಡುಪು ಧರಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ಬೆಂಗಳೂರು) ಮತ್ತು 176 ಖಾದಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದ ಪ್ರತಿ ತಾಲೂಕಿನಲ್ಲೂ ಖಾದಿ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮೂಡುಬಿದಿರೆಯ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಲಿರುವ ಈ ಮೇಳವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡುಬಿದಿರೆ ತಾಲೂಕು ಶಾಖೆ, ತಾಲೂಕು ಆಡಳಿತ ಮೂಡುಬಿದಿರೆ ಹಾಗೂ ಬೆಂಗಳೂರಿನ ರೂರಲ್ ರಿಸೋರ್ಸ್ ಡೆವಲಪ್‌ಮೆಂಟ್ ಅಸೋಸಿಯೇಷನ್ (RRDA) ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ನವೆಂಬರ್ 23 ಮತ್ತು 24ರಂದು ಬೆಳಗ್ಗೆ 10.00 ರಿಂದ ರಾತ್ರಿ 8.00 ಗಂಟೆಯವರೆಗೆ ಮೇಳ ನಡೆಯಲಿದ್ದು, ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡುಬಿದಿರೆ ತಾಲೂಕು ಶಾಖೆಯ ಅಧ್ಯಕ್ಷರಾದ ಡಾ. ದೊರೆಸ್ವಾಮಿ ಕೆ.ಎನ್. ಪ್ರಕಟಣೆಯಲ್ಲಿ ಕೋರಿದ್ದಾರೆ.

Post a Comment

0 Comments

Advertisement