ಮೂಡುಬಿದಿರೆ: ವ್ಯಕ್ತಿತ್ವದ ಔನ್ನತ್ಯ, ಸೇವೆಯ ಪಾವಿತ್ರ್ಯ ಹಾಗೂ ಸಮಾಜಮುಖಿ ಸಾಧನೆಗಳಿಂದ ಧರ್ಮ ಮತ್ತು ಮಾನವೀಯತೆಯ ಸಮನ್ವಯಕ್ಕೆ ಅಪೂರ್ವ ಭಾಷ್ಯ ಬರೆದಿರುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಾಧನಾಯಾನವನ್ನು ಸಂಗೀತದ ಮೂಲಕ ಅಭಿವ್ಯಕ್ತಿಸುವ ವಿಶಿಷ್ಟ ಪ್ರಯತ್ನವಾಗಿ, ಗಾಯಕಿ ಮೌಲ್ಯ ವಿ. ಆರ್. ಜೈನ್ ಹಾಡಿರುವ, ಯಶವಂತ್ ಸಂಗೀತ ನಿರ್ದೇಶನದ ವಾದಿರಾಜ ಸಾಹಿತ್ಯದ ‘ಧರ್ಮಸ್ಥಳದಳು ರಾಜಿಪ ದಿನಮಣಿ’ ಗೀತೆಯನ್ನು ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರು, ಪೂಜ್ಯ ಹೆಗ್ಗಡೆಯವರ ವ್ಯಕ್ತಿತ್ವದ ಮಹೋನ್ನತ ಆಯಾಮಗಳನ್ನು ಸ್ಮರಿಸಿ, ಅವರ ಸೇವಾಪರಂಪರೆ, ಮೌಲ್ಯನಿಷ್ಠ ಬದುಕು ಹಾಗೂ ಸಮಾಜದ ಸರ್ವತೋಮುಖ ಪ್ರಗತಿಗೆ ಅವರು ನೀಡಿರುವ ಕೊಡುಗೆಗಳು ಅನುಕರಣೀಯವೆಂಬ ಆಶಯವನ್ನು ವ್ಯಕ್ತಪಡಿಸಿದರು. ಇಂತಹ ಅಪೂರ್ವ ಸಾಧನೆಯನ್ನು ಸಾಹಿತ್ಯ ಮತ್ತು ಸಂಗೀತದ ಮೂಲಕ ಜನಮಾನಸಕ್ಕೆ ತಲುಪಿಸುವುದು ಅವರ ವ್ಯಕ್ತಿತ್ವಕ್ಕೆ ಸಲ್ಲಿಸುವ ಅರ್ಥಪೂರ್ಣ ಗೌರವವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾಕ್ಟರ್ ಬಿ.ಪಿ ಸಂಪತ್ ಕುಮಾರ್ ಹಾಗೂ ಗೀತೆಯ ಹಿನ್ನೆಲೆ ಗಾಯಕಿ ಮೌಲ್ಯ ವಿ. ಆರ್. ಜೈನ್ ಉಪಸ್ಥಿತರಿದ್ದರು.

0 Comments