ಬೆಳುವಾಯಿ - ಕೆಸರ್ ಗದ್ದೆಯಲ್ಲಿ ಹೆದ್ದಾರಿ ಕ್ರಾಸಿಂಗ್ ಬೇಕು : ಮೂಡುಬಿದಿರೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸ್ಥಳೀಯರ ಆಗ್ರಹ

ಬೆಳುವಾಯಿ - ಕೆಸರ್ ಗದ್ದೆಯಲ್ಲಿ ಹೆದ್ದಾರಿ ಕ್ರಾಸಿಂಗ್  ಬೇಕು : ಮೂಡುಬಿದಿರೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸ್ಥಳೀಯರ ಆಗ್ರಹ 

ಮೂಡುಬಿದಿರೆ - ಕಾಕ೯ಳ ರಾ. ಹೆದ್ದಾರಿ ಸಾಗುವ ಬನ್ನಡ್ಕ ಮೇಲ್ಸೇತುವೆಯಿಂದ ಬೆಳುವಾಯಿ ಮೇಲ್ಸೇತುವೆಯವರೆಗೆ ಚತುಷ್ಪಥ ಹೆದ್ದಾರಿಯಲ್ಲಿ ಕ್ರಾಸಿಂಗ್ ಇಲ್ಲ. ಕೆಸರ್‌ಗದ್ದೆಯಲ್ಲಿ ಶಾಲೆ, ಆಸ್ಪತ್ರೆ, ಪಂಚಾಯತ್, ಸಹಕಾರಿ ಸಂಸ್ಥೆಗಳಿದ್ದು ಜನರು ನಾಲ್ಕು ಕಿ.ಮೀ ಸುತ್ತು ಬಳಸಿ ಬರಬೇಕು. ಕೆಸರ್‌ಗದ್ದೆಯಲ್ಲಿ ಹೆದ್ದಾರಿ ಕ್ರಾಸಿಂಗ್ ತೆರೆಯಬೇಕೆಂದು ಎಂದು ಪಂಚಾಯತ್ ಮಾಜಿ ಅಧ್ಯಕ್ಷ ರಾಘು ಪೂಜಾರಿ  ಸಹಿತ ಸ್ಥಳೀಯರು ಪ್ರಜಾಸೇವೆ ಆಂದೋಲನದಲ್ಲಿ ಆಗ್ರಹಿಸಿದ್ದಾರೆ.  

ಬೆಳುವಾಯಿ ಕಂಡಿಗ ಗ್ರೀನ್ಸ್‌ನಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಗ್ರಾಮಸ್ಥರು ಕ್ರಾಸಿಂಗ್ ಬೇಕೆಂದು ಶಾಸಕರು ಮತ್ತು ತಹಶೀಲ್ದಾರರ ಗಮನಕ್ಕೆ ತಂದರು. 

ಈ ಕುರಿತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು. 

ಸರ್ಕಾರಿ ಭೂಮಿ ಅತಿಕ್ರಮಣ : 
ಬೆಳುವಾಯಿ ಗ್ರಾಮದ ಕಾನ ಎಂಬಲ್ಲಿ ಸರ್ವೇ ನಂಬ್ರ ೩೯೦ ರಲ್ಲಿ ೧೧ ಎಕ್ರೆ ಸರ್ಕಾರಿ ಸ್ಥಳವಿದ್ದು ಇದನ್ನು  ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದಾರೆ. ಡೀಮ್ಡ್ ಫಾರೆಸ್ಟ್ ಹೊರತುಪಡಿಸಿದ ಜಾಗವನ್ನು ಗುರುತಿಸಿ ಅದನ್ನು ನಿವೇಶನ ರಹಿತರಿಗೆ ಹಂಚಲು ಪಂಚಾಯತ್‌ಗೆ  ನೀಡಬೇಕು ಎಂದು ಪಂಚಾಯತ್‌ನ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕೆ ಪೂಜಾರಿ, ಭಾಸ್ಕರ ಆಚಾರ್ಯ, ಮಾಜಿ ಸದಸ್ಯ ಭರತ್ ಶೆಟ್ಟಿ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಸ್ಥಳ ಸರ್ವೇ ನಡೆಸಿ ಜಾಗ ಗುರುತು ಪಡಿಸುವಂತೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಗ್ರಾಮ ಕರಣಿಕರಿಗೆ ಸೂಚಿಸಿದರು. 

 ಸ್ಥಳೀಯರಾದ ಚಂದ್ರಶೇಖರ ಎಂಬವರು ಪಂಚಾಯತ್ ಜಾಗವನ್ನು ಅತಿಕ್ರಮಣಗೊಳಿಸಿ ಅದರಲ್ಲಿ ತೆಂಗು ಹಾಗೂ ಇತರ ಗಿಡಗಳನ್ನು ಬೆಳೆಸಿರುವ ಬಗ್ಗೆ ಪಂಚಾಯತ್ ನ ಮಾಜಿ ಸದಸ್ಯರುಗಳು ತಹಶೀಲ್ದಾರ್ ಗಮನಕ್ಕೆ ತಂದರು. 
ಈಗಾಗಲೇ ಈ ಬಗ್ಗೆ ಜಾಗ ಅತಿಕ್ರಮಣಗೊಳಿಸಿರುವವರಿಗೆ ತೆರವು ಮಾಡಬೇಕೆಂದು ಸೂಚಿಸಲಾಗಿತ್ತು ಆದರೆ ಅದಕ್ಕೆ ಅವರು ಸ್ಪಂದಿಸದೆ ಇರುವುದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮೂಲಕ ತೆರವುಗೊಳಿಸುವಂತೆ ತಹಶೀಲ್ದಾರ್ ಸೂಚಿಸಿದರು. 

 ಪೊಲೀಸ್ ವೃತ್ತ ನಿರೀಕ್ಷಕ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಕನ್ನಡ ಜಾಗೃತಿ ಸಮಿತಿ ದ. ಕ ಜಿಲ್ಲೆಯ ಸದಸ್ಯ  ರಾಜೇಶ್ ಕಡಲಕೆರೆ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.  ಉಪತಹಸೀಲ್ದಾರ್ ರಾಮ ಕೆ ಕಾರ್‍ಯಕ್ರಮ ನಿರೂಪಿಸಿ ವಂದಿಸಿದರು.

 ಮೆಸ್ಕಾಂ, ಕಂದಾಯ, ಹೆದ್ದಾರಿ, ಅರಣ್ಯ ಮತ್ತಿತರ ಇಲಾಖೆಗಳಿಗೆ ಸಂಬಂಧಿಸಿದ ೩೫ ಅರ್ಜಿಗಳನ್ನು ಸ್ವೀಕರಿಸಲಾಯಿತು. ಉಳಿದಂತೆ ಹಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. 

------------------------------

ಪ್ರಜಾಸೇವೆ ಆಂದೋಲನ ಉದ್ಘಾಟನೆ  

ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮೂಡುಬಿದಿರೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿ ಪ್ರತೀ ಇಲಾಖೆಗಳಲ್ಲಿಯೂ ಸಮಸ್ಯೆಗಳಿವೆ. ಜನರ ಅಹವಾಲು ಬೇಡಿಕೆಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ವಿನಾ ಕಾರಣ ಜನರನ್ನು ಸತಾಯಿಸಬಾರದು. ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥ ಸಾಧ್ಯವಾಗದಿದ್ದರೆ ಸರಿಯಾದ ಮಾಹಿತಿ ನೀಡಬೇಕು ಎಂದು  ಹೇಳಿದರು.
-----------------------

Post a Comment

0 Comments

Advertisement