ಕಠಿಣ ಪರಿಶ್ರಮದೊಂದಿಗೆ ಉನ್ನತ ಮಟ್ಟಕ್ಕೆ ಬೆಳೆಯುವ ಗುರಿಯಿರಲಿ : ಡಾ. ಅರ್ಪಿತಾ ಪ್ರತಾಪ್ ಸಿಂಹ

ಕಠಿಣ ಪರಿಶ್ರಮದೊಂದಿಗೆ ಉನ್ನತ ಮಟ್ಟಕ್ಕೆ ಬೆಳೆಯುವ ಗುರಿಯಿರಲಿ : ಡಾ. ಅರ್ಪಿತಾ ಪ್ರತಾಪ್ ಸಿಂಹ

ಮೂಡುಬಿದಿರೆ: ವೈದ್ಯಕೀಯ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ತಮ್ಮನ್ನು ತಾವು ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳುವ ಗುರಿ ಹೊಂದಬೇಕು. ಭವಿಷ್ಯದ ವೈದ್ಯರಾಗಿ ತಮ್ಮದೇ ಆದ ಉನ್ನತ ಮಾನದಂಡಗಳನ್ನು ರೂಪಿಸಿಕೊಂಡು ಶ್ರೇಷ್ಠತೆಯತ್ತ ಸಾಗಬೇಕು ಎಂದು ಮೂಡಿಗೆರೆ ಹೊಯ್ಸಳ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಅರ್ಪಿತಾ ಪ್ರತಾಪ್ ಸಿಂಹ ಹೇಳಿದರು.

ಅವರು ಮಿಜಾರು ಆವರಣದಲ್ಲಿರುವ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 24ನೇ ಪದವಿ ಹಾಗೂ 13ನೇ ಸ್ನಾತಕೋತ್ತರ ಪದವಿ ಬ್ಯಾಚ್‌ಗಳ ಶೈಕ್ಷಣಿಕ ಪಯಣಕ್ಕೆ ಸೋಮವಾರ ಚಾಲನೆ ನೀಡಿದ ‘ಆರಂಭ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಲ್ಲವೂ ನಮ್ಮ ನಿರೀಕ್ಷೆಯಂತೆ ನಡೆಯುತ್ತದೆ ಎಂಬುದಿಲ್ಲ. ಅನಿರೀಕ್ಷಿತ ಸವಾಲುಗಳು, ಸೋಲುಗಳು ಹಾಗೂ ಕಠಿಣ ಸಂದರ್ಭಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಎದೆಗುಂದದೆ, ಸೋಲಿನಿಂದ ಪಾಠ ಕಲಿತು ಮುನ್ನಡೆಯುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಯಶಸ್ಸಿನಷ್ಟೇ ವೈಫಲ್ಯವೂ ಬದುಕಿನಲ್ಲಿ ಮಹತ್ವದ ಪಾಠಗಳನ್ನು ಕಲಿಸುತ್ತದೆ.  ವೈದ್ಯಕೀಯ ವೃತ್ತಿಯಲ್ಲಿ ಜ್ಞಾನ ಮತ್ತು ಕೌಶಲ್ಯದಷ್ಟೇ ರೋಗಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವೂ ಮುಖ್ಯ ಎಂದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೇಷ್ಠತೆ ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಹೊಸ ಅವಕಾಶಗಳನ್ನು ಸ್ವೀಕರಿಸುವ ಮತ್ತು ಅಗತ್ಯವಿದ್ದಾಗ ಅಪಾಯಗಳನ್ನು ಎದುರಿಸುವ ಧೈರ್ಯವೂ ಅಗತ್ಯ. ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಸೀಮಿತವಾಗದೆ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕು. ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಶೈಕ್ಷಣಿಕ ಛಾಪು ಮೂಡಿಸಬೇಕು ಎಂದು ಸಲಹೆ ನೀಡಿದರು.

ಸರ್ವಾಂಗಾಸನದಲ್ಲಿ ವಿಶ್ವ ದಾಖಲೆ ಮಾನ್ಯತೆ
ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ವಿಕಾಸ್,  ಸರ್ವಾಂಗಾಸನ ಭಂಗಿಯಲ್ಲಿ ದೀರ್ಘಕಾಲ ಇದ್ದ ಸಾಧನೆಗಾಗಿ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನ ಮಾನ್ಯತೆ ಪಡೆದಿರುವುದನ್ನು ವಿಶೇಷವಾಗಿ ಗುರುತಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ. ವಿದ್ಯಾರಾಣಿ ಉಪಸ್ಥಿತರಿದ್ದರು. ಯೋಗೇಶ್ವರನ್  ಎಂ ಕಾಯ೯ಕ್ರಮ ನಿರೂಪಿಸಿದರು. ಉಪನ್ಯಾಸಕಿ ಡಾ ರಶ್ಮಿತಾ ಆಳ್ವ  ವಂದಿಸಿದರು.

Post a Comment

0 Comments

Advertisement