ಮೂಡುಬಿದಿರೆ: ಇಂದಿನ ಯುಗದಲ್ಲಿ ಹಳೆಗನ್ನಡದ ಓದು ಮತ್ತು ಸಾಹಿತ್ಯದ ಭವಿಷ್ಯ ಕುರಿತಂತೆ ಅನೇಕ ರೀತಿಯ ಆತಂಕಗಳಿವೆ. ಹಳೆಗನ್ನಡದ ಸಾಹಿತ್ಯದ ಓದಿಗೆ ಸಂಬಂಧಿಸಿ ವಿಶೇಷ ತರಬೇತಿಯ ಅಗತ್ಯವಿದ್ದು ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸ, ಪರಂಪರೆ ಮರೆಯದಂತೆ ಅವುಗಳನ್ನು ಉಳಿಸಿ ಬೆಳೆಸುವ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಹಿರಿಯ ಸಾಹಿತಿ ಉಡುಪಿಯ ಡಾ. ಪಾದೇಕಲ್ಲು ವಿಷ್ಣು ಭಟ್ ಹೇಳಿದರು.
ಅವರು ಮಂಗಳವಾರ ಸಂಜೆ ಸಮಾಜ ಮಂದಿರದಲ್ಲಿ ವರ್ಧಮಾನ ಪ್ರಶಸ್ತಿ ಪೀಠ (ರಿ. ) ಮೂಡುಬಿದಿರೆ ಇದರ 46 ನೇ ವರ್ಷದ 2026ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮೂಡುಬಿದಿರೆಯ ಟಿ.ಎ.ಎನ್. ಖಂಡಿಗೆ ಅವರು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ನೈತಿಕತೆಯ ಬದುಕು ಮುಖ್ಯ. ಆ ಜೀವನಾನುಭವದ ಸಾಹಿತ್ಯ ಹಿತವಾಗಿರುತ್ತದೆ. ಬರವಣಿಗೆಯೊಂದು ಲೌಕಿಕ ತಪಸ್ಸು ಎಂದರು.
ಸಮಾಜ ಮಂದಿರ ಸಭಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಪೂರಕವಾಗಿ ನಡೆದ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ ವರ್ಧಮಾನ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಪ್ರಶಸ್ತಿ ಪ್ರದಾನಗೈದರು.ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಿಗೆ ಕ್ರಮವಾಗಿ 25 ಮತ್ತು 15 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಮಂದಿರ ಸಭಾದ ಪರವಾಗಿಯೂ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.
ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ವರ್ತಮಾನದ ವಿದ್ವಾಂಸರುಗಳನ್ನು ಗುರುತಿಸಿ ವರ್ಧಮಾನ ಪ್ರಶಸ್ತಿ ಪೀಠ ಸಮೃದ್ಧವಾಗಿದೆ. ಸಂಘರ್ಷದ ಇಂದಿನ ದಿನಗಳಲ್ಲಿ ಮನಸ್ಸು ಕಟ್ಟುವ ಮತ್ತು ಮೃಗೀಯ ಗುಣ ಅಳಿಸುವ ಕೆಲಸಸಾಹಿತಿಗಳು ಮತ್ತು ಸಾಹಿತ್ಯದಿಂದಾಗಬೇಕು. ಈ ನಿಟ್ಟಿನಲ್ಲಿ ಪ್ರಶಸ್ತಿ ಪುರಸ್ಕೃತರು ಕಲೆತು ಸಂವಾದ ಶಿಬಿರಗಳು ನಡೆದಲ್ಲಿ ಸಮಾಜಕ್ಕೆ ಅದರ ಲಾಭ ದೊರೆಯುತ್ತದೆ ಎಂದರು.
ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯ ಚಂದ್ರ ಜೈನ್ ಶುಭಾಶಂಸನೆಗೈದರು. ಪೀಠದ ಉಪಾಧ್ಯಕ್ಷರುಗಳಾದ ಡಾ. ಪುಂಡಿಕಾ ಗಣಪಯ್ಯ ಭಟ್, ಕೆ. ಶ್ರೀಪತಿ ಭಟ್, ಜಯರಾಜ ಕಂಬಳಿ, ಬಾಹುಬಲಿ ಪ್ರಸಾದ್, ಪ್ರತಾಪ್ ಕುಮಾರ್, ನಿರಂಜನ್ ಕುಮಾರ್ ಶೆಟ್ಟಿ, ಜಿನೇಂದ್ರ ಹೆಗ್ಡೆ ಹೆಚ್. ಮತ್ತಿತರರು ಉಪಸ್ಥಿತರಿದ್ದರು.
ಪೀಠದ ಪ್ರಧಾನ ನಿರ್ದೇಶಕ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪೀಠದ ಸಹ ನಿರ್ದೇಶಕ ಸದಾನಂದ ನಾರಾವಿ ಸಮ್ಮಾನ ಪತ್ರ ಪತ್ರವಾಚಿಸಿದರು.ಸಹನಿರ್ದೇಶಕ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ನೇಮಿರಾಜ ಶೆಟ್ಟಿ ವಂದಿಸಿದರು.

0 Comments