ಶ್ರೀ ಮಹಾವೀರ ಕಾಲೇಜಿನಲ್ಲಿ 157ನೇ ಗಾಂಧಿ ಜಯಂತಿ ಆಚರಣೆ

ಶ್ರೀ ಮಹಾವೀರ ಕಾಲೇಜಿನಲ್ಲಿ 157ನೇ ಗಾಂಧಿ ಜಯಂತಿ ಆಚರಣೆ

ಮೂಡುಬಿದಿರೆ : 
ಶ್ರೀ ಮಹಾವೀರ ಕಾಲೇಜಿನಲ್ಲಿ 157ನೇ ಗಾಂಧಿ ಜಯಂತಿಯನ್ನು ಅತ್ಯಂತ ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು.

 ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೇ ವಿದ್ಯಾರ್ಥಿ, ಹಿರಿಯ ಪತ್ರಕರ್ತ  ಧನಂಜಯ ಮೂಡುಬಿದಿರೆ ಅವರು  ಗಾಂಧೀಜಿ ಅವರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಮಾತನಾಡಿ "ಜಗತ್ತಿನಲ್ಲಿ ಅತೀ ಹೆಚ್ಚು ಕೃತಿಗಳು ಪ್ರಕಟವಾಗಿರುವುದು ಗಾಂಧೀಜಿಯವರ ಬಗ್ಗೆ. ಭಾರತಕ್ಕೆ ವಿಶ್ವವ್ಯಾಪಿ ಗೌರವ ತಂದ ಹೆಸರು ಗಾಂಧೀಜಿಯವರದ್ದು. ಸರಳತೆಯ ಸಂಕೇತ ಹಾಗೂ ಜನೋಪಯೋಗಿಯಾಗಿದ್ದ ಹತ್ತಿಯ ಹೂವು ಗಾಂಧೀಜಿಯವರಿಗೆ ತುಂಬಾ ಇಷ್ಟವಾಗಿತ್ತು. ಸ್ವಾತಂತ್ರ್ಯ ಹೋರಾಟದ ಹುಮ್ಮಸ್ಸಿನಲ್ಲಿ ಕುಟುಂಬವನ್ನು ನಿರ್ಲಕ್ಷಿಸಬಾರದು ಎಂಬ ಭಾವನೆ, ಕಾಯಾ-ವಾಚಾ-ಮನಸಾ ಸ್ವಚ್ಛತೆ ಪಾಲನೆ, ಜನರ ಭಾವನೆಗಳನ್ನು ಗೌರವಿಸುವುದು, ಅಚಲ ಮನೋಬಲ, ಸರ್ವರ ಒಳಿತನ್ನು ಬಯಸುವುದು, ಸತ್ಯಾಗ್ರಹ, ಹಾಸ್ಯಪ್ರಜ್ಞೆ ಎಲ್ಲವೂ ಗಾಂಧೀಜಿಯವರಲ್ಲಿ ಇತ್ತು" ಎಂದು ನೆನಪಿಸಿಕೊಂಡರು.

ಪದವಿ ಕಾಲೇಜಿನ ಪ್ರಾಂಶುಪಾಲರಾದ  ಡಾ. ರಾಧಾಕೃಷ್ಣ ಅವರು ಮಾತನಾಡಿ, "ಗಾಂಧೀಜಿಯವರ ಜೀವನದ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ. ಅವರ ವಿಚಾರಧಾರೆಯಲ್ಲಿ ಅಡಗಿರುವ ಸತ್ಯಗಳನ್ನು ನಾವು ಅರಿಯಬೇಕು. ವಿದೇಶದಲ್ಲಿ ಉದ್ಯೋಗವನ್ನು ಮುಂದುವರಿಸುವ ಅವಕಾಶವಿದ್ದರೂ ಭಾರತದ ಹಿತಕ್ಕಾಗಿ ಹಿಂತಿರುಗಿ ಬಂದು, ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಎಚ್ಚರಿಸಿದ ಗಾಂಧೀಜಿಯವರ ಆದರ್ಶಗಳು ಮತ್ತು ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ವಿಯಾಗಬಹುದು" ಎಂದರು.
 ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ  ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಯುವ ರೆಡ್‌ಕ್ರಾಸ್ ಅಧಿಕಾರಿ ಗೀತಾಕುಮಾರಿ ಡಿ., ಎನ್.ಎಸ್.ಎಸ್. ಅಧಿಕಾರಿಗಳಾದ ಶಾರದಾ ಎ. ಹಾಗೂ ಚಿತ್ರಲೇಖ, ರೇಂಜರ್ಸ್ ಅಧಿಕಾರಿ ಆಶ್ರಿತಾ ಮತ್ತು ರೋವರ್ಸ್ ಅಧಿಕಾರಿ ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ನಡೆದ ‘ಗಾಂಧಿ ಸ್ಮೃತಿ’ಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧೀಜಿಯವರಿಗೆ ಪ್ರಿಯವಾದ ಭಜನೆಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿ, ನಿತೇಶ್ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು. ಗಾಂಧಿ ಜಯಂತಿಯ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಗಾಂಧಿ ಸಾಹಿತ್ಯದ ಕುರಿತ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Post a Comment

0 Comments

Advertisement