ಕಲ್ಲಬೆಟ್ಟುವಿನಲ್ಲಿ 'ಶ್ರೀ ಗಣೇಶ ಸೇವಾಧಾಮ' ಕಟ್ಟಡಕ್ಕೆ ಶಿಲಾನ್ಯಾಸ


ಕಲ್ಲಬೆಟ್ಟುವಿನಲ್ಲಿ 'ಶ್ರೀ ಗಣೇಶ ಸೇವಾಧಾಮ' ಕಟ್ಟಡಕ್ಕೆ ಶಿಲಾನ್ಯಾಸ


ಮೂಡುಬಿದಿರೆ: ರಜತ ಸಂಭ್ರಮದಲ್ಲಿರುವ ಕಲ್ಲಬೆಟ್ಟು ಸಾವ೯ಜನಿಕ ಶ್ರೀ ಗಣೇಶೋತ್ಸವದ  ಅಂಗವಾಗಿ ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇದರ ವತಿಯಿಂದ ಕಲ್ಲಬೆಟ್ಟುವಿನಲ್ಲಿ ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ `ಶ್ರೀ ಗಣೇಶ ಸೇವಾಧಾಮ' ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನಡೆಯಿತು. 

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ, ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ  ಮಾತನಾಡಿ ಸನಾತನ ಸಂಸ್ಕೃತಿಯ ಮೂಲ ತ್ಯಾಗ. ಸೇವಾ ಮನೋಭಾವ ಸನಾತನ ಧರ್ಮದ ಮೂಲ ತತ್ವವಾಗಿದೆ. ಸಮಾಜದಲ್ಲಿ ವಿಶಾಲ ಮನೋಭಾವದ ವ್ಯಕ್ತಿಗಳಿರುವುದರಿಂದಲೇ ನಾವೆಲ್ಲಾ ನೆಮ್ಮದಿಯಾಗಿದ್ದೇವೆ ಎಂದ ಅವರು ಸಮರ್ಪಣಾ ಭಾವದಿಂದ ತ್ಯಾಗ ಮಾಡಿದರೆ ಸುಸಂಸ್ಕೃತ ಸಮಾಜವನ್ನು ಕಟ್ಟಬಹುದು ಎಂದರು. 

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ಅವರು ಆಶೀವ೯ಚನ ನೀಡಿ ಧಾರ್ಮಿಕ ಆಚರಣೆಗಳು ಸಂಸ್ಕಾರಯುತ ಬದುಕಿಗೆ ಪ್ರೇರಣೆಯಾಗಬೇಕು, ಭಗವಂತನ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಗಣೇಶ ಸೇವಾ ಧಾಮ ಕಟ್ಟಡ ಶೀಘ್ರ ನಿರ್ಮಾಣಗೊಳ್ಳಲಿ ಎಂದು ಶುಭ ಹಾರೈಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಎಸ್.ಪ್ರಕಾಶ್ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸೇವಾಧಾಮ ಕಟ್ಟಡಕ್ಕೆ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. 

ಶಾಸಕ ಉಮಾನಾಥ ಎ. ಕೋಟ್ಯಾನ್, ಕರಿಂಜೆ ಗುತ್ತು ಕೆ. ಕೃಷ್ಣರಾಜ್ ಹೆಗ್ಡೆ ಶಿಲಾನ್ಯಾಸ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು. 

ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ವಿಕಾಸ್ ಕುಮಾರ್,  ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ, ಮಾರೂರು- ಖಂಡಿಗ  ರಾಮದಾಸ್ ಅಸ್ರಣ್ಣ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ನ್ಯೂವೈಬ್ರಂಟ್ ಕಾಲೇಜಿನ ಟ್ರಸ್ಟಿ ಚಂದ್ರಶೇಖರ್ ರಾಜೇ ಅರಸ್, ಮೂಡುಬಿದಿರೆ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ, ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇದರ ಟ್ರಸ್ಟಿಗಳಾದ ಶ್ರೀಪತಿ ಭಟ್, ಪದ್ಮಯ್ಯ ಸುವರ್ಣ, ಕಲ್ಲಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬೈಲೂರು, ಸ್ವರ್ಣ ಗೌರಿ ಮಾತೃಮಂಡಳಿ ಅಧ್ಯಕ್ಷೆ ಶಕುಂತಳಾ ರಾಮಚಂದ್ರ ರಾವ್ ಉಪಸ್ಥಿತರಿದ್ದರು. 

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಟ್ರಸ್ಟ್ ನಲ್ಲಿ ಸೇವೆ ಸಲ್ಲಿಸಿದ ಈವರೆಗಿನ ಅಧ್ಯಕ್ಷರುಗಳನ್ನು ಹಾಗೂ ಕಲ್ಲಬೆಟ್ಟು-ಕರಿಂಜೆ-ಮಾರೂರು ವಲಯದ ವಿವಿಧ ಶ್ರದ್ಧಾ ಕೇಂದ್ರಗಳು ಮತ್ತು ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. 
ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಸ್ವಾಗತಿಸಿದರು.ಟ್ರಸ್ಟಿ ದಿನೇಶ್ ಆಚಾರ್ಯ ಪಟ್ಟಿ ವಾಚಿಸಿದರು.  ರೋಹನ್ ಅತಿಕಾರಬೆಟ್ಟು ಕಾಯ೯ಕ್ರಮ ನಿರೂಪಿಸಿದರು. ಸುಧೀರ್ ಪೈ ವಂದಿಸಿದರು.

Post a Comment

0 Comments

Advertisement