ಸೆ. 13ರಂದು ವಾಲ್ಪಾಡಿಯಲ್ಲಿ ಸೋಣದ ಕೋಲ
ಮೂಡುಬಿದಿರೆ: ಸೆ. 13 ರಂದು ವಾಲ್ವಾಡಿಯ ರಾಜಂದೈವ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಸುವ ಸೋಣದ ಕೋಲ ವಿಚಾರವಾಗಿ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು ಇದರಿಂದಾಗಿ ಗ್ರಾಮದಲ್ಲಿ ಅಶಾಂತಿ ಹಾಗೂ ದ್ವೇಷದ ವಾತಾವರಣ ನಿರ್ಮಾಣವಾಗುವ ಆತಂಕವಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ ಗೌಡ ಜೋಗೊಟ್ಟು ಕಳವಳ ವ್ಯಕ್ತ ಪಡಿಸಿದ್ದಾರೆ.
ಅವರು ಶನಿವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸೆ.8ರಂದು ಒಂದು ಬಣ ಸೋಣದ ಕೋಲ ನಡೆಸಲು ನಿರ್ಧರಿಸಿತ್ತು. ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅದನ್ನು ತಡೆದಿದ್ದರು. ಬಳಿಕ ಮತ್ತೊಂದು ಬಣ ಸೆ.13ರಂದು ಸೋಣದ ಕೋಲ ನಡೆಸುವುದಾಗಿ ತೀರ್ಮಾನಿಸಿದ್ದು, ಇದರಿಂದ ಎರಡು ಬಣಗಳ ನಡುವಿನ ಗೊಂದಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗಣೇಶ ಗೌಡ ಜೋಗೊಟ್ಟು ತಿಳಿಸಿದ್ದಾರೆ.
ಈ ಕುರಿತು ಮೂಡುಬಿದಿರೆಯ ತಹಶೀಲ್ದಾರ್, ಪೊಲೀಸ್ ಠಾಣೆ, ಪೊಲೀಸ್ ಕಮಿಷನರ್, ಎಸಿಪಿ, ಪಣಂಬೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಶಾಂತಿ ಕದಡುವ ಪರಿಸ್ಥಿತಿಯ ಕುರಿತು ಈಗಾಗಲೇ ದೂರು ನೀಡಲಾಗಿದೆ. ಆದರೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.
ಸೆ.11ರಂದು ಮೂಡುಬಿದಿರೆಯ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಯಾವುದೇ ರೀತಿಯ ಗೊಂದಲ ಮಾಡಬಾರದು ಹಾಗೂ ಅಶಾಂತಿ ಉಂಟಾದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ ತಹಶೀಲ್ದಾರ್ ಸೂಚಿಸಿದ್ದರು ಎಂಬುದನ್ನೂ ಅವರು ತಿಳಿಸಿದ್ದಾರೆ.
ಆದರೆ ಸಭೆಯಿಂದ ಹೊರಬಂದ ಬಳಿಕ ಕೆಲವರು ವಿಡಿಯೋ ಮಾಡಿ, ತಹಶೀಲ್ದಾರ್ ಮೌಖಿಕವಾಗಿ ಆದೇಶ ನೀಡಿದ್ದಾರೆ ಎಂದು ಹೇಳಿಕೊಂಡು ಅದನ್ನು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಗೊಂದಲ ಉಂಟಾಗುತ್ತಿದೆ ಎಂದು ಗಣೇಶ ಗೌಡ ಜೋಗೊಟ್ಟು ಆರೋಪಿಸಿದ್ದಾರೆ.
ಈ ದೈವಸ್ಥಾನದಲ್ಲಿ ಕಳೆದ 20 ವರ್ಷಗಳಿಂದ ಬೇರೆ ಬೇರೆ ರೀತಿಯ ಗಲಾಟೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ದೈವಸ್ಥಾನದ ಪಕ್ಕದಲ್ಲೇ ಮತ್ತೊಂದು ದೈವಸ್ಥಾನ ನಿರ್ಮಾಣವಾಗಿದ್ದು, ಅಲ್ಲಿ ಕೋಲ ಹಾಗೂ ಕಳೆದ ವರ್ಷ ಜಾತ್ರೆ ನಡೆದಿತ್ತು. ಈ ವರ್ಷವೂ ಆ ದೈವಸ್ಥಾನದವರು ಈ ಬಣದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ನಾಗಬ್ರಹ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುವ ಸಂದರ್ಭದಲ್ಲಿ ಬ್ರಾಹ್ಮಣರನ್ನು ಎಳೆದುಹಾಕಿ ಹಲ್ಲೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗಲಾಟೆ ನಡೆದಿದ್ದು, ಪ್ರಕರಣಗಳು ದಾಖಲಾಗಿವೆ ಎಂದು ಗಣೇಶ ಗೌಡ ಜೋಗೊಟ್ಟು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಗ್ರಾಮದ ಮೂಲ ಅಸ್ರಣ್ಣರಾದ ಉಮಾಶಂಕರ್ ಅವರು ದೈವಸ್ಥಾನ ಹಾಗೂ ಇತರ ಧಾರ್ಮಿಕ ಕಾರ್ಯಗಳಿಗೆ ಬರುತ್ತಿರಲಿಲ್ಲ. ಬಳಿಕ ಕಳೆದ ಎರಡು ವರ್ಷಗಳಿಂದ ಗ್ರಾಮದ ಗುತ್ತಿನವರೊಂದಿಗೆ ಸೇರಿಕೊಂಡು ಈ ಬಣದವರು ಜಾತ್ರೆ ನಡೆಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೀಗ ವಿಶ್ವನಾಥ್ ಮತ್ತು ಈ ಬಣದ ನಡುವೆ ವೈಮನಸ್ಸು ಉಂಟಾಗಿ ಬೇರೆಯಾಗಿರುವುದರಿಂದ ಎರಡು ತಂಡಗಳ ನಡುವೆ ಗಲಾಟೆ ನಡೆಯುವ ಸಂಭವ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.
ದೈವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಆ ಬೀಗವನ್ನು ಒಡೆದು ಸೆ.13ರಂದು ಸೋಣದ ಕೋಲ ನಡೆಸುವುದಾಗಿ ಸಭೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಗಣೇಶ ಗೌಡ ಜೋಗೊಟ್ಟು ಆರೋಪಿಸಿದ್ದಾರೆ. ಬೆಳಿಗ್ಗೆ ಜನರನ್ನು ಸೇರಿಸಿ ಕೋಲ ನಡೆಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಪುನಃ ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಯಾವುದೇ ಎಚ್ಚರಿಕೆ ನೀಡಿದರೂ ಅವರು ಬಗ್ಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ದೈವಸ್ಥಾನದ ಬೀಗ ಒಡೆದು ಕೋಲ ನಡೆಸುವುದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಾಗಲಿದೆ. ಒಂದು ವೇಳೆ ಬೀಗ ಒಡೆದು ಸೋಣದ ಕೋಲ ನಡೆಸಿದರೆ ಅದು ಸಂಪ್ರದಾಯದ ವಿರುದ್ಧವಾಗುತ್ತದೆ ಎಂದು ಗಣೇಶ ಗೌಡ ತಿಳಿಸಿದ್ದಾರೆ.
ಸೋಣದ ಕೋಲ ನಡೆದರೂ ಮೂಲ ಅಸ್ರಣ್ಣರು ಭಾಗವಹಿಸುವುದಿಲ್ಲ. ಮೂಲ ಕ್ಷೇತ್ರದ ಭಂಡಾರವೂ ಈ ಸಂದರ್ಭದಲ್ಲಿ ಬರುವುದಿಲ್ಲ. ಕುಕ್ಕಿನಂತಾಯ ದೈವದ ಮೂಲ ಭಂಡಾರವೂ ಸೋಣದ ಕೋಲಕ್ಕೆ ಬರುವುದಿಲ್ಲ. ಮೂಲ ಅಸ್ರಣ್ಣರಾದ ಉಮಾಶಂಕರ್ ಕೂಡ ಆಗಮಿಸುವುದಿಲ್ಲ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಸೋಣದ ಕೋಲ ನಡೆಸುವುದರಿಂದ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ವಿಚಾರದಲ್ಲಿ ಎರಡು ಬಣಗಳು ತಮ್ಮ ತಮ್ಮ ದೂರುಗಳನ್ನು ನೀಡಿದ್ದು, ಮೂಡುಬಿದಿರೆ ತಹಶೀಲ್ದಾರರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಆದೇಶ ನೀಡಲಾಗಿದೆ ಎಂದು ಗಣೇಶ ತಿಳಿಸಿದ್ದಾರೆ.
ತಹಶೀಲ್ದಾರ್ ಅವರ ಆದೇಶವನ್ನು ಲೆಕ್ಕಿಸದೆ ಗೋಪಾಲ ಪೂಜಾರಿಯವರ ಬಣವು ‘ನಾವು ಊರಿನವರು’ ಎಂದು ಹೇಳಿಕೊಂಡು ದೈವಸ್ಥಾನಕ್ಕೆ ಹಾಕಿರುವ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕೋಲ ನಡೆಸುವುದಾಗಿ ನಿರ್ಣಯಿಸಿ, ಈ ವಿಚಾರವನ್ನು ಊರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಮನವಿಯಾಗಿದೆ.

0 Comments