ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು ಇತ್ತೀಚೆಗೆ ನಿವೃತ್ತಿ ಹೊಂದಿರುವ ಶಿವಾನಂದ ಕಾಯ್ಕಿಣಿ ಅವರನ್ನು ಶಾಲೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಕಳೆದ ಮೂರು ದಶಕಗಳಿಂದ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾಗಿ, ಮೂಡುಬಿದಿರೆ ತಾಲೂಕು ಯುವಜನ ಕ್ರೀಡಾ ಇಲಾಖೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಇವರು ದಕ್ಷ ಪ್ರಾಮಾಣಿಕ ಶಿಕ್ಷಕರಾಗಿ, ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೋಶಾಧಿಕಾರಿಯಾಗಿ, ಮೂಡುಬಿದಿರೆ ತಾಲೂಕು ಅಧ್ಯಕ್ಷರಾಗಿ ಮತ್ತು ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.
ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಕಾಯ್ಕಿಣಿ ಅವರು ತಮ್ಮ ಕ್ರಿಯಾಶೀಲ ನಡೆ ನುಡಿಗಳಿಂದ ವಿದ್ಯಾರ್ಥಿಗಳಿಗೆ ಸಹೋದ್ಯೋಗಿ ಬಂಧುಗಳಿಗೆ ಆತ್ಮೀಯರಾಗಿದ್ದರು.
ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿರುವ ಅವರು ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ.
ಸಮಾರಂಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಅಭಿವೃದ್ಧಿ ಸಮಿತಿಯ ಹರೀಶ್ ಆಚಾರ್ಯ, ಶಬ್ಬೀರ್, ಇಲಾಖೆಯ ಜ್ಞಾನೇಶ್, ಗಣಪತಿ ನಾಯಕ್, ಹಾಗೂ ಇತರರು ಕಾಯ್ಕಿಣಿ ಅವರ ಕಾರ್ಯ ಚತುರತೆ, ಶಾಲೆಗಾಗಿ ಮಾಡಿದ ಕಾರ್ಯಗಳು, ವಿವಿಧ ಇಲಾಖೆಗಳಲ್ಲಿ ನಡೆಸಿದ ಅತ್ಯುತ್ತಮ ಕಾರ್ಯಗಳನ್ನು ನೆನೆಸಿಕೊಂಡು ಶುಭ ಹಾರೈಸಿದರು.
ಭೈರವೇಶ್ವರ ಭಟ್ ಸ್ವಾಗತಿಸಿದರು. ಸುನೀತಾ ಪೈ ಕಾರ್ಯಕ್ರಮ ನಿರ್ವಹಿಸಿದರು.

0 Comments