ಕರಾವಳಿಗೆ ಮಲ್ನಾಡ್ ಟೂರಿಸಂ ಕಾರ್ಪೊರೇಶನ್ : ಸಚಿವ ಯು. ಟಿ ಖಾದರ್

ಕರಾವಳಿಗೆ ಮಲ್ನಾಡ್ ಟೂರಿಸಂ ಕಾರ್ಪೊರೇಶನ್ : ಸಚಿವ ಯು. ಟಿ ಖಾದರ್
ಮಂಗಳೂರು: ಕರಾವಳಿ ಪ್ರದೇಶದ ಯುವಕರ ಭವಿಷ್ಯಕ್ಕೆ ಪೂರಕವಾಗಿ, ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮಲ್ನಾಡ್ ಟೂರಿಸಂ ಕಾರ್ಪೊರೇಶನ್ ಆರಂಭಿಸಲು ಸರಕಾರ ತೀರ್ಮಾನಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು 80ನೇ ಸ್ವಾತಂತ್ರ್ಯೋತ್ಸವದಂಗವಾಗಿ ನೆಹರೂ ಮೈದಾನದಲ್ಲಿ ಶನಿವಾರ ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣಗೈದು  ಪೆರೇಡ್ ವೀಕ್ಷಣೆಯ ಬಳಿಕ  ಸಂದೇಶ ನೀಡಿದರು.

ನಮ್ಮ ಮಂಗಳೂರು ಮಿನಿ ಭಾರತ ಇದ್ದಂತೆ ಇಲ್ಲಿ ವಿವಿಧ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ ಮತ್ತು ವೈವಿಧ್ಯಮಯ ಜೀವನ ಪದ್ಧತಿಗಳ ಜನರು ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ನಮ್ಮ ನಂಬಿಕೆ, ಭಾಷೆ ಭಿನ್ನವಾಗಿರಬಹುದು. ರಾಜಕೀಯ ಅಭಿಪ್ರಾಯಗಳೂ ಬೇರೆಯಾಗಿರಬಹುದು. ಆದರೆ ನಮ್ಮ ಭವ್ಯ ರಾಷ್ಟ್ರ ಧ್ವಜದಡಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ನಾವೆಲ್ಲರೂ ಒಂದೇ. ನಮ್ಮ ಹೆಮ್ಮೆಯ ಗುರುತು ಭಾರತೀಯತೆ. ಇದುವೇ ನಮ್ಮ ಪ್ರಬಲ ಶಕ್ತಿ ಎಂದವರು ಹೇಳಿದರು. 

ರೈತರು, ಯುವಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ಪೂರಕವಾಗಿ ಸರಕಾರ ೧೦೦ ದಿನಗಳ ೧೦ ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೈತ ಮಿತ್ರ ಯೋಜನೆಯಡಿ ಒಂದು ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ. ೫೦ರಷ್ಟು ಸಬ್ಸಿಡಿ ನೀಡಲಿದೆ.
ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಯುವ ಕರ್ನಾಟಕ ನಿರ್ಮಾಣ ಯೋಜನೆಯಡಿ ಭಾರತ್ ಜೋಡೋ ಯುವಕ ಸಂಘ ಮಿಷನ್ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೬೦೦೦, ನಗರ ಪ್ರದೇಶಗಳಲ್ಲಿ ೪೦೦೦ ಸಂಘಗಳ ಸ್ಥಾಪನೆ, ವಾರ್ಷಿಕ ತಲಾ ೧೦ ಲಕ್ಷ ರೂ. ಅನುದಾನದಂತೆ ವಾರ್ಷಿಕ ೧೦೦೦ ಕೋಟಿ ರೂ.ಗಳ ವೆಚ್ಚದಲ್ಲಿ ಯುವಕರಲ್ಲಿ ಆರೋಗ್ಯ ಕೌಶಲ್ಯ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡಲಾಗುವುದು.
ಯುವ ಉದ್ಯೋಗ ಸೇತು, ಸರಕಾರಿ ಆಸ್ಪತ್ರೆಗಳ ದತ್ತು ಯೋಜನೆ, ನಶೆ ಮುಕ್ತ ಕರ್ನಾಟಕ, ಪ್ರಜಾಸೇವೆ ಇಲಾಖೆ, ಭೂ ಗ್ಯಾರಂಟಿ, ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. 

ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿ.ಪಂ. ಸಿಇಒ ನರ್ವಡೆ ವಿನಾಯಕ್ ಕರ್ಭಾರಿ, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆ, ಕೆನರಾ ಶಾಲೆ ಮಕ್ಕಳಿಂದ ವಂದೇ ಮಾತರಂ, ನಾಡಗೀತೆ ಹಾಗೂ ರೈತ ಗೀತೆ ಗಾಯನ ನಡೆಯಿತು.

-------------------------------
ತೇಗದ ಸಿರಿ ಯೋಜನೆ-ಭೂಮಾಲಕರಿಗೆ ಶೇ.೭೦ರಷ್ಟು ರಾಜಸ್ವ ಪಾಲು:
ಪರಿಸರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರಕಾರವು ವಾಣಿಜ್ಯ ಮೌಲ್ಯವುಳ್ಳ ತೇಗ ಸೇರಿದಂತೆ ಇತರ ಮರಗಳನ್ನು ಜಮೀನು ಮಾಲಕರು ಅವರ ಜಮೀನು ಪಕ್ಕದಲ್ಲಿರುವ ಸರಕಾರಿ ಜಾಗಗಳಲ್ಲಿ ಬೆಳೆಸಲು ಪ್ರೋತ್ಸಾಹಿಸಲಿದೆ. ಮರಗಳ ಮಾರಾಟದಿಂದ ಬರುವ ರಾಜಸ್ವದ ಶೇ.೭೦ರಷ್ಟು ಭೂ ಮಾಲಕರಿಗೆ ನೀಡುವ ಯೋಜನೆ ಇದಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
------------------------------

Post a Comment

0 Comments