ಮೂಡುಬಿದಿರೆ: ತ್ರಿಭುವನ್ ಆಟೋಮೊಟಿವ್ ಸ್ಪೋರ್ಟ್ಸ್ ಕ್ಲಬ್ (TASC), ಇಂಡಿಯನ್ ಮೋಟಾರ್‌ಸ್ಪೋರ್ಟ್ಸ್ ಕ್ಲಬ್ (IMSC) ಹಾಗೂ ನಮ್ಮ ಮೂಡುಬಿದಿರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಮಾರ್ಗದರ್ಶನದಲ್ಲಿ ಮೂಡುಬಿದಿರೆ ಅಡ್ವೆಂಚರ್ ಡ್ರೈವ್–2026ರ 5ನೇ ಆವೃತ್ತಿಯ ಟೈಮ್–ಸ್ಪೀಡ್–ಡಿಸ್ಟೆನ್ಸ್ (TSD) ಕಾರ್ ರ‍್ಯಾಲಿಯು ಆಗಸ್ಟ್ 8 ಮತ್ತು 9ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ ಎಂದು ಆಯೋಜನಾ ಸಮಿತಿಯ ಅಕ್ಷಯ್ ಕೆ. ಜೈನ್ ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ರ‍್ಯಾಲಿಯು ಕೇವಲ ಮೋಟಾರ್‌ಸ್ಪೋರ್ಟ್ಸ್ ಸ್ಪರ್ಧೆಯಾಗಿರದೆ,ರಸ್ತೆ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ರ್ಯಾಲಿಗೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಮೋಟಾರ್‌ಸ್ಪೋರ್ಟ್ಸ್ ಸ್ಪರ್ಧಿಗಳು ಭಾಗವಹಿಸಲಿದ್ದು, ಎಕ್ಸ್‌ಪರ್ಟ್, ನವೀಸ್, ಡಾಕ್ಟರ್ಸ್, ಸ್ಟೂಡೆಂಟ್ಸ್, ಲೇಡೀಸ್, ಕಪಲ್ಸ್, ಕಾರ್ಪೊರೇಟ್, ಬೆದ್ರ ಲೋಕಲ್, ಕ್ಲಬ್ ಹಾಗೂ ಮೂಡುಬಿದಿರೆ ರ‍್ಯಾಲಿ ಸ್ಟಾರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಪ್ರತಿಯೊಂದು ತಂಡಕ್ಕೆ ₹6,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಚಾಲಕ ಹಾಗೂ ಸಹ-ಚಾಲಕರಿಗೆ ಅನ್ವಯವಾಗುವ FMSCI ಪರವಾನಗಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಿದೆ.
ಆಗಸ್ಟ್ 8ರಂದು ಸಂಜೆ 4.30ಕ್ಕೆ ಮೊದಲ ದಿನದ ಧ್ವಜಾರೋಹಣ ನಡೆಯಲಿದ್ದು, ಆಗಸ್ಟ್ 9ರಂದು ಬೆಳಿಗ್ಗೆ 9.15ಕ್ಕೆ ಎರಡನೇ ದಿನದ ಧ್ವಜಾರೋಹಣ ನಡೆಯಲಿದೆ. ಅದೇ ದಿನ ಸಂಜೆ 4.30ರಿಂದ ಬಹುಮಾನ ವಿತರಣಾ ಸಮಾರಂಭವು ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ.
ರಸ್ತೆ ಸಂಚಾರ ನಿಯಮ ಪಾಲನೆ, ಸುರಕ್ಷಿತ ವಾಹನ ಚಾಲನೆ ಹಾಗೂ ಜವಾಬ್ದಾರಿಯುತ ರಸ್ತೆ ಬಳಕೆಯ ಮಹತ್ವವನ್ನು ಸಾರುವ ಪ್ರಯತ್ನ ಕಾರ್ಯಕ್ರಮದ ಮೂಲಕ ನಡೆಯಲಿದ್ದು "ನಮ್ಮ ಮೂಡುಬಿದಿರೆ – ಸ್ವಚ್ಛ ಮೂಡುಬಿದಿರೆ" ಅಭಿಯಾನಕ್ಕೂ ಬೆಂಬಲ ನೀಡಲಾಗುತ್ತಿದೆ ಅಲ್ಲದೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಕಸ ಎಸೆಯದಿರುವುದು ಹಾಗೂ ನಗರವನ್ನು ಸ್ವಚ್ಛವಾಗಿಡುವ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತದೆ.
ರ‍್ಯಾಲಿಯ ಮಾರ್ಗವು ಮೂಡುಬಿದಿರೆಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರಮುಖ ಸ್ಥಳಗಳ ಮೂಲಕ ಸಾಗಲಿದ್ದು, ಭಾಗವಹಿಸುವವರಿಗೆ ಪ್ರದೇಶದ ವಿಶೇಷತೆಯನ್ನು ಪರಿಚಯಿಸುವುದರ ಜೊತೆಗೆ ಮೂಡುಬಿದಿರೆಯನ್ನು ರಾಷ್ಟ್ರಮಟ್ಟದ ಪ್ರವಾಸೋದ್ಯಮ ತಾಣವಾಗಿ ಪರಿಚಯಿಸುವ ಉದ್ದೇಶವನ್ನೂ ಹೊಂದಿದೆ ಎಂದು ಅಕ್ಷಯ್ ಜೈನ್ ಮಾಹಿತಿ ನೀಡಿದರು.
ಆಯೋಜನಾ ಸಮಿತಿ ಸದಸ್ಯ ಯಾಸಿರ್ ಸುದ್ದಿಗೊಷ್ಟಿಯಲ್ಲಿದ್ದರು.

0 Comments