ನಾರಾವಿ: ಸೂರ್ಯನಾರಾಯಣ ಭಜನಾ ಮಂಡಳಿ, ನಾರಾವಿ ಇದರ 5ನೇ ವರ್ಷದ ಸಂಭ್ರಮದ ಅಂಗವಾಗಿ ಮೊದಲ ಬಾರಿಗೆ ಆಯೋಜಿಸಲಾದ ಭಜಕರ ಕ್ರೀಡೋತ್ಸವವು ಭಕ್ತಿ, ಸಂಭ್ರಮ ಹಾಗೂ ಕ್ರೀಡಾಸ್ಫೂರ್ತಿಯೊಂದಿಗೆ ಯಶಸ್ವಿಯಾಗಿ ನಡೆಯಿತು.
ಭಜಕರಲ್ಲಿ ಒಗ್ಗಟ್ಟು, ಸ್ನೇಹ, ಆರೋಗ್ಯ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡೋತ್ಸವದಲ್ಲಿ ಮಕ್ಕಳು, ಯುವಕರು, ಹಿರಿಯರು, ಭಜಕರು, ಭಜನಾ ತಂಡದ ಪೋಷಕರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳು ಉತ್ಸಾಹದಿಂದ ನಡೆದಿದ್ದು, ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡರು.
ಕಾರ್ಯಕ್ರಮವನ್ನು ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ತಂತ್ರಿ ಅವರ ಆಶೀರ್ವಚನದೊಂದಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ. ಅಳಿಯೂರು, ಶ್ರೀದೇವಿ ಜ್ಯುವೆಲ್ಲರ್ಸ್ ನಾರಾವಿಯ ಶ್ರೀ ಪ್ರಶಾಂತ್ ಆಚಾರ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ಹರಿಣಿ, ನಾರಾವಿ ಒಕ್ಕೂಟದ ಅಧ್ಯಕ್ಷ ಶ್ರೀಯುತ ಪ್ರವೀಣ್ ನಾರಾವಿ, ದೇವಸ್ಥಾನದ ಕಮಿಟಿಯ ಸದಸ್ಯರು ಜಗದೀಶ್ ಹೆಗ್ಡೆ, ಕಮಿಟಿ ಸದಸ್ಯರಾದ ಶ್ರೀ ಜಗದೀಶ್ ನಾರಾವಿ, ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು, ಶ್ರೀ ಸೂರ್ಯನಾರಾಯಣ ಕುಣಿತ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸುಜಯ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.ಹಾಗೂ ಕಾರ್ಯಕ್ರಮದ ಸ್ವಾಗತ ಹಾಗೂ ಧನ್ಯವಾದ ಸಮರ್ಪಣೆಯನ್ನು ತಂಡದ ಭಜಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ, ಪುತ್ತಿಗೆ ತಂಡದ ಚೈತ್ರ, ಅಶ್ರಿತ, ಯತೀಶ್, ಪ್ರಣೀತ್, ಅಕ್ಷಿತ್, ಪ್ರಣೀತ್ ಹಾಗೂ ಲಿಖಿತ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯ ನಂತರ ಆಗಮಿಸಿದ ನಾರಾವಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಉದಯ ಹೆಗ್ಡೆ ಅವರು ಮಕ್ಕಳೊಂದಿಗೆ ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ, ಮಕ್ಕಳ ಪ್ರತಿಭೆ, ಭಜನೆಯ ಮೇಲಿನ ಆಸಕ್ತಿ ಹಾಗೂ ಶಿಸ್ತನ್ನು ಮೆಚ್ಚಿ ಶುಭ ಹಾರೈಸಿದರು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸಂಸ್ಕಾರ ಮತ್ತು ಒಗ್ಗಟ್ಟಿನ ಭಾವನೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೃಷ್ಣ ತಂತ್ರಿ ಅರ್ಚಕರು ಅವರು, "ಭಜನೆ ಮತ್ತು ಕ್ರೀಡೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪ್ರತಿಯೊಂದು ಸಂದರ್ಭದಲ್ಲಿಯೂ ಭಕ್ತಿ ಮತ್ತು ಶ್ರದ್ಧೆಯಿಂದ ಮುಂದುವರಿಯಬೇಕು. ಭಜನಾ ಸೇವೆ ನಿರಂತರವಾಗಿ ನಡೆಯುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು," ಎಂದು ಆಶೀರ್ವಚನ ನೀಡಿದರು.
ಶ್ರೀ ಸಂತೋಷ್ ಪಿ. ಅಳಿಯೂರು ಅವರು ಮಾತನಾಡಿ, "ಸೂರ್ಯನಾರಾಯಣ ಭಜನಾ ಮಂಡಳಿಯ ಮಕ್ಕಳು ಕುಣಿತ ಭಜನೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಕುಳಿತು ಭಜನೆ, ನಿರೂಪಣೆ ಹಾಗೂ ಇತರ ಭಕ್ತಿಪರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕು," ಎಂದು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ಕ್ರೀಡೋತ್ಸವದ ವಿವಿಧ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಣೆಯನ್ನು ಮುಂಬರುವ ಭಜಕರ ಸಮಾವೇಶ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗೆ ಸೂರ್ಯನಾರಾಯಣ ಭಜನಾ ಮಂಡಳಿಯ ಪದಾಧಿಕಾರಿಗಳು, ಭಜಕರು, ಸ್ವಯಂಸೇವಕರು, ಮಕ್ಕಳ ಪೋಷಕರು, ಸ್ಥಳೀಯರು, ಗ್ರಾಮದ ಹಿರಿಯರು, ಧರ್ಮಸ್ಥಳ ಒಕ್ಕೂಟದ ಸದಸ್ಯರು, ದಾನಿಗಳು ಹಾಗೂ ನೇರ-ಪರೋಕ್ಷವಾಗಿ ಸಹಕರಿಸಿದ ಎಲ್ಲರ ಸಹಕಾರ ಮಹತ್ವವಾಗಿತ್ತು.
ಸಹಕರಿಸಿದ ಎಲ್ಲಾ ಗಣ್ಯರು, ಭಜಕರು, ಪೋಷಕರು ಹಾಗೂ ಸಾರ್ವಜನಿಕರಿಗೆ ಸೂರ್ಯನಾರಾಯಣ ಭಜನಾ ಮಂಡಳಿ, ನಾರಾವಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ


0 Comments