ಬಹು ಭಾಷಾ ಯಕ್ಷಗಾನ ವೇಷಧಾರಿಯಾಗಿ ಮತ್ತು ತಾಳಮದ್ದಳೆ ಅರ್ಥದಾರಿ ಕಲಾವಿದನಾಗಿಯೂ ,ಜೊತೆಗೆ ಯಕ್ಷಗಾನ ಸಂಘಟನಾ ಚತುರನಾಗಿ, ಉತ್ತಮ ಲೇಖಕ,ವಾಗ್ಮಿ, ವಿಮರ್ಶಕನಾಗಿ, ಯಕ್ಷಗಾನ ಪ್ರಸಂಗ ರಚನಕಾರನಾಗಿ,ಕಲಾವಿದರ ಕಷ್ಟ ಸುಖಗಳಲ್ಲಿಯೂ ಸಮಭಾಗಿಯಾಗಿ ಆಪತ್ಬಾಂಧವನಾಗಿ ನೆರವು ನೀಡಿ, ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿರುವ ಶಾಂತರಾಮ ಕುಡ್ವರ ಬಹುಮುಖ ವ್ಯಕ್ತಿತ್ವ ಅಭಿನಂದನೀಯ, ಅಭಿವಂದನೀಯ. ಯಕ್ಷಗಾನಕ್ಕೆ ಕುಡ್ವರ ಕೊಡುಗೆ ಅಪಾರ ಎಂದು ಮೂಡುಬಿದಿರೆಯ ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್ ಅವರು ಹೇಳಿದರು.
ಇಲ್ಲಿನ ಜನತಾ ವಿವಿದುದ್ದೇಶ ಸಹಕಾರೀ ಸಂಘ ಪಡುಮಾರ್ನಾಡು ಮತ್ತು
ಸಾವಯವ ಕೃಷಿಕ ಬಳಗ ಮೂಡುಬಿದಿರೆ ಇವರ ಅಶ್ರಯದಲ್ಲಿ ಯಕ್ಷಗಾನ ಕಲಾವಿದ ಮತ್ತು ವಿಮರ್ಶಕ ಶಾಂತರಾಮ ಕುಡ್ವರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ಸಂದರ್ಭದಲ್ಲಿ ಅಭಿನಂದನಾ ಭಾಷಣ ಮಾಡಿ ಅವರು ಮಾತನಾಡಿದರು.
ಮೂಡುಬಿದಿರೆಯಲ್ಲಿ ಹತ್ತಕ್ಕೂ ಹೆಚ್ಚು ಯಕ್ಷಗಾನ ಸಂಘಟನೆಗಳು ಇದ್ದು ಅದರಲ್ಲಿ ಯಕ್ಷೋಪಾಸನಮ್, ಯಕ್ಷ ಸಂಗಮ ಮತ್ತು ಯಕ್ಷ ಸಾರಸ್ವತ ಸಂಸ್ಥೆಯನ್ನು ಸ್ವತಃ ಸ್ಥಾಪಿಸಿ, ಮೂರೂ ಸಂಸ್ಥೆಗಳು ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ಕುಡ್ವರು ನಡೆಸಿಕೊಂಡು ಮುನ್ನಡೆಸುತ್ತಾ ಬರುತ್ತಿದ್ದು, ಮೂರೂ ಸಂಸ್ಥೆಗಳೂ ನಿರಂತರವಾಗಿ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಲ್ಲಿ ಕುಡ್ವರು ಯಶಸ್ವಿಯಾಗಿದ್ದಾರೆ ,ಕುಡ್ವರ ನಿಸ್ವಾರ್ಥ ಪರಿಶ್ರಮದಿಂದ ಮೂಡುಬಿದಿರೆ ಈಗ ವಿದ್ಯಾ ಕಾಶಿಯೊಂದಿಗೆ ಯಕ್ಷಗಾನ ಕಾಶಿಯೂ ಆಗಿದೆ ಎಂದು ಭಂಡಾರ್ಕಾರ್ ಅವರು ಸಂತಸ ಪಟ್ಟರು.
ಶಾಂತರಾಮ ಕುಡ್ವರನ್ನು ರೇಷ್ಮೆ ಶಾಲು ಹೊದಿಸಿ, ಪೇಟ ತೊಡಿಸಿ ಫಲ ಪುಷ್ಪ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯ್ತು.
ಅನ್ನದಾತರಾಗಿರುವ ಸಾವಯವ ರೈತ ಬಳಗದಿಂದ ಮತ್ತು ಜನತಾ ಸಹಕಾರ ಸಂಘದಿಂದ ತಾನು ಸನ್ಮಾನಗೊಂಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ ಕುಡ್ವ ಅವರು ಈ ಗೌರವವನ್ನು ತಾನೂ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತುಂಬು ಹೃದಯದ ಕ್ರತಜ್ಞತೆ ಅರ್ಪಿಸಿದರು.ಈ ಹಿಂದೆ ಕೃಷಿ ವಿಚಾರಗಳ ಬಗ್ಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ "ಕೃಷಿ ವಿಜಯ" ಎಂಬ ತಾಳಮದ್ದಳೆ ಕೂಟ ಕೂಡ ನಡೆದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರೀ ಧುರಿಣ ಜನತಾ ವಿವಿದುದ್ದೇಶ ಸಹಕಾರೀ ಸಂಘದ ಅಧ್ಯಕ್ಷ ಪಡುಮಾರ್ನಾಡು ದಯಾನಂದ ಪೈ ಅವರು ಮಾತನಾಡಿ ಈಗಾಗಲೇ ಕುಡ್ವರಿಗೆ ದೇಶ ವಿದೇಶಗಳಲ್ಲಿ 350 ಕ್ಕೂ ಹೆಚ್ಚಿನ ಸನ್ಮಾನಗಳು ಆಗಿದ್ದು, ಯಕ್ಷಗಾನಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವ ಶಾಂತರಾಮ ಕುಡ್ವರ ಯಕ್ಷಗಾನ ಸೇವೆಯನ್ನು ಅವರು ಪ್ರಶಂಸಿದರು.ಕಡಲಕೆರೆ ಪ್ರೇರಣಾ ಶಾಲೆಯ ಸಂಚಾಲಕನಾಗಿಯೂ ಕುಡ್ವರು ಜಿಲ್ಲೆಯಲ್ಲಿಯೇ ಈ ವಿದ್ಯಾರ್ಥಿ ಸಂಸ್ಥೆಯನ್ನು ಮಾದರಿ ಶಾಲೆಯನ್ನಾಗಿಸುವಲ್ಲಿ ಕಾರಣಕರ್ತರಾಗಿದ್ದಾರೆ ಎಂದೂ ಶ್ಲಾಘಿಸಿದರು.
ಪ್ರಗತಿಪರ ಸಾವಯವ ಕೃಷಿಕ ಇರ್ವತ್ತೂರು ವೆಂಕಟರಮಣ ಭಟ್, ದಯಾನಂದ ಭಟ್ ಅಚ್ಚರಕಟ್ಟೆ,ಅಮೃತ ಸಾವಯವ ಮಳಿಗೆಯ ಅಶೋಕ್ ಭಂಡಾರಿ, ರೈತ ಸಂಘದ ಅಧ್ಯಕ್ಷ ಹರಿಪ್ರಸಾದ್ ನಾಯಕ್,ಸಾವಯವ ಕೃಷಿಕ ಗೋಪಾಲಕೃಷ್ಣ ಭಟ್,ಜಿನೇಂದ್ರ ಹೆಗ್ಡೆ,ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಸುಧೀರ್ ನಾಯಕ್, ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರಭಾಕರ ಪ್ರಭು,ನವೀನ್ ಅಂಬೂರಿ ಮತ್ತಿತರರು ಉಪಸ್ಥಿತರಿದ್ದರು.
ದಯಾನಂದ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಅಶೋಕ್ ಭಂಡಾರಿ ವಂದಿಸಿದರು.


0 Comments