*ಬೆರಳ ತುದಿಯಲ್ಲಿ ಜಗತ್ತು: ಕ್ಷಯಿಸಿ ಹೋಗುತ್ತಿರುವ ಮಾನವೀಯ ಸಂಬಂಧಗಳು*
ನಾವು ಇವತ್ತು ಜಾಗತಿಕ ಭೂಪಟದಲ್ಲಿ ಪ್ರಪಂಚದ ಯಾವುದೇ ಮೂಲೆಯ ದಾರಿಯನ್ನಾದರೂ ಸುಲಭವಾಗಿ ಹುಡುಕಬಲ್ಲೆವು, ಆದರೆ ಪಕ್ಕದ ಕೋಣೆಯಲ್ಲಿರುವ ಮನಸ್ಸಿನ ದಾರಿಯನ್ನು ಮಾತ್ರ ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ! ಇವತ್ತು ನಮ್ಮ ಇಡೀ ಜಗತ್ತು ಮುಖಾಮುಖಿ ಭೇಟಿಯ ‘ಆಪ್ತ ಸ್ಪರ್ಶ’ದಿಂದ, ಯಾಂತ್ರಿಕ ‘ಸಂದೇಶ’ದ ಚೌಕಟ್ಟಿಗೆ ಬಂದು ನಿಂತಿದೆ.
ಒಂದೇ ಸೂರಿನಡಿ, ಒಂದೇ ಕತ್ತಲ ಕೋಣೆಯಲ್ಲಿ ನಾಲ್ಕು ಜೀವಗಳು ಕುಳಿತಿವೆ. ಅಲ್ಲಿ ಗಾಢವಾದ ಮೌನವಂತೂ ಆವರಿಸಿದೆ, ಆದರೆ ಆ ಮೌನವನ್ನು ಸೀಳಿಕೊಂಡು ಮಂದಬೆಳಕಿನ ಪರದೆಯ ನೀಲಿ ಬೆಳಕು ಆ ನಾಲ್ಕೂ ಮುಖಗಳ ಮೇಲೆ ತಣ್ಣಗೆ ಮಿನುಗುತ್ತಿದೆ. ಬೆರಳುಗಳು ಪರದೆಯ ಮೇಲೆ ಯಾಂತ್ರಿಕವಾಗಿ ಜಾರುತ್ತಿವೆ. ವಿಪರ್ಯಾಸವೆಂದರೆ, ಜಗತ್ತಿನ ಯಾವುದೋ ಮೂಲೆಯ ಅಪರಿಚಿತನ ಸ್ಥಿತಿಗೆ ಕ್ಷಣಾರ್ಧದಲ್ಲಿ ಮೆಚ್ಚುಗೆಯ ಸಂಕೇತ ಒತ್ತುವ ಹಸ್ತಾಕ್ಷರಗಳು, ತೀರ ಪಕ್ಕದಲ್ಲೇ ಕುಳಿತ ಆಪ್ತನ ಕಣ್ಣೀರನ್ನು ಒರೆಸಲು ಚಾಚುತ್ತಿಲ್ಲ! ಮುಖಾಮುಖಿ ಕೂತು ಮನಸ್ಸು ಬಿಚ್ಚಿ ಹರಟುವ ಸುಂದರ ಕ್ಷಣಗಳು ಇವತ್ತು ಕೇವಲ ನೆನಪುಗಳ ಗರ್ಭ ಸೇರುತ್ತಿವೆ.
ಇಂದಿನ ಪ್ರಚಲಿತ ಸಮಾಜದ ಅತಿ ದೊಡ್ಡ ವಿಪರ್ಯಾಸವೇ ಇದು—**ನಾವು ಇಡೀ ಜಗತ್ತನ್ನು ನಮ್ಮ ಬೆರಳ ತುದಿಗೆ ತಂದುಕೊಂಡಿದ್ದೇವೆ ನಿಜ, ಆದರೆ ನಮ್ಮವರೇ ಇರಬೇಕಾದವರ ಜೊತೆಗಿನ ಭಾವನಾತ್ಮಕ ನಂಟನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇವೆ!**
### ತಾಂತ್ರಿಕತೆಯ ತಂಪು ಮತ್ತು ಒಳಮನಸ್ಸಿನ ಒಣಗುವಿಕೆ
ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನ ನಮಗೆ ಭೌತಿಕ ಸೌಕರ್ಯಗಳ ಮಹಾಪೂರವನ್ನೇ ಹರಿಸಿವೆ, ಒಪ್ಪೋಣ. ಆದರೆ, ಮನುಷ್ಯನಿಗೆ ಬದುಕಿನುದ್ದಕ್ಕೂ ಅತ್ಯಂತ ಅಗತ್ಯವಾಗಿ ಬೇಕಾಗಿದ್ದ ಸಹಜ ಕರುಣೆ, ನಿಷ್ಕಲ್ಮಶ ಪ್ರೀತಿ ಮತ್ತು ಪರಸ್ಪರ ನಂಬಿಕೆಯ ಹೆಣಿಗೆಯನ್ನು ಈ ಆತುರದ ಜಗತ್ತು ಕಳೆದುಕೊಳ್ಳುತ್ತಿದೆಯೇನೋ ಎಂಬ ಗಾಢವಾದ ಆತಂಕ ಮೂಡುತ್ತಿದೆ. ತಂತ್ರಜ್ಞಾನದ ಅತಿವೇಗದಲ್ಲಿ ಕ್ಷಯಿಸಿ ಹೋಗುತ್ತಿರುವ ಈ ಸಂಬಂಧಗಳನ್ನು ಮತ್ತೆ ಜೋಡಿಸಲು, ಒಣಗುತ್ತಿರುವ ಒಳಮನಸ್ಸಿಗೆ ತೇವ ನೀಡಲು ಇವತ್ತು ನಮಗೆ ದಾರಿದೀಪವಾಗಿ, ಸಂಜೀವಿನಿಯಾಗಿ ಕಾಣಿಸುತ್ತಿರುವುದು ‘ಸಾಹಿತ್ಯ’ ಮಾತ್ರ.
ಇವತ್ತಿನ ಜಗತ್ತಿನಲ್ಲಿ ಎಲ್ಲವನ್ನೂ ಲಾಭ-ನಷ್ಟದ ಲೆಕ್ಕಾಚಾರದಲ್ಲೇ ತೂಗಲಾಗುತ್ತಿದೆ. ಸಂಬಂಧಗಳು ಇವತ್ತು ಕೇವಲ ‘ಬಳಕೆ’ಯ ಆಧಾರದ ಮೇಲೆ ನಿರ್ಧಾರವಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಮನುಷ್ಯ ತನ್ನ ಒಳಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲದೆ, ಒಳಗೊಳಗೇ ಒಂಟಿಯಾಗುತ್ತಿದ್ದಾನೆ. ಮಾನಸಿಕ ಒತ್ತಡ, ವಿಷಾದದ ನೆರಳು ಇವತ್ತು ಕೇವಲ ನಗರದ ತೊಂದರೆಗಳಾಗಿ ಉಳಿದಿಲ್ಲ, ಹಳ್ಳಿಗಳ ಹಸಿರನ್ನೂ ಆವರಿಸಿಕೊಳ್ಳುತ್ತಿದೆ.
### ಸಾಹಿತ್ಯ: ಮನುಷ್ಯತ್ವದ ಸಹಜ ಚಿಕಿತ್ಸೆ
ಇಂತಹ ಹೊತ್ತಿನಲ್ಲಿ ಸಾಹಿತ್ಯ ನಮ್ಮ ಕೈಹಿಡಿಯುತ್ತದೆ. ಒಂದು ಚಂದದ ಕವಿತೆ, ಒಂದು ಮಾಗಿದ ಕಾದಂಬರಿ ಅಥವಾ ನಮ್ಮ ಹಿರಿಯರ ಸಾಲುಗಳು ನಮಗೆ ಕೇವಲ ಅಕ್ಷರಗಳಾಗಿ ಕಾಣಿಸುವುದಿಲ್ಲ; ಅವು ನಮ್ಮ ಒಂಟಿತನವನ್ನು ಒರೆಸುವ ಆಪ್ತ ಗೆಳೆಯನಂತೆ ಜೊತೆಯಾಗುತ್ತವೆ. ಹಿರಿಯರ ಮಾಗಿದ ಮಾತುಗಳು ನಮ್ಮೊಳಗೆ ತಂದುಕೊಡುವ ಸಕಾರಾತ್ಮಕತೆ ಮತ್ತು ಬದುಕಿನ ವಾಸ್ತವಿಕತೆಯ ಅರಿವಿದೆಯಲ್ಲ, ಅದನ್ನು ಯಾವುದೇ ಆಧುನಿಕ ಉಪಕರಣಗಳು ಕೊಡಲು ಸಾಧ್ಯವಿಲ್ಲ.
ಬರಹಗಳು ಎನ್ನುವುದು ಕೇವಲ ಕಲ್ಪನೆಯ ಲೋಕವಲ್ಲ; ಅದು ಮನುಷ್ಯನಿಗೆ ಕೊಡುವ ಅಂತರಂಗದ ಚಿಕಿತ್ಸೆ. ಉತ್ತಮ ಕಾವ್ಯಗಳನ್ನು ಓದುವಾಗ ನಮ್ಮ ಮಿದುಳಿನಲ್ಲಿ ಸಹಾನುಭೂತಿ ಮತ್ತು ಸಮಾಧಾನದ ರಸಗಳು ಸ್ರವಿಸುತ್ತವೆ ಎಂದು ಇವತ್ತಿನ ನರವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಸಾಹಿತ್ಯ ನಮ್ಮ ಅಹಂಕಾರವನ್ನು ಕರಗಿಸಿ, ಇತರರ ನೋವನ್ನು ಗೌರವಿಸುವ ಹೃದಯವಂತಿಕೆಯನ್ನು ಧಾರೆ ಎರೆಯುತ್ತದೆ.
> **ಅಕ್ಷರಗಳ ಈ ಪ್ರಪಂಚವು ಕೇವಲ ಪದಗಳ ಸಂತೆ ಅಥವಾ ಜಾತ್ರೆಯಲ್ಲ; ಅದು ನಮ್ಮ ಒಳಮನಸ್ಸಿನ ಕಸವನ್ನು ತೊಳೆದು ಶುದ್ಧೀಕರಿಸುವ ಪಾವನ ಗಂಗೆ.**
>
### ಕಲ್ಪಿತ ಜಗತ್ತಿಗೆ ಅಕ್ಷರದ ಮದ್ದು
ಸಾಹಿತ್ಯದ ಮೂಲ ಉದ್ದೇಶವೇ ಮನುಷ್ಯನನ್ನು ಮನುಷ್ಯನಿಗೆ ಹತ್ತಿರ ಮಾಡುವುದು. ನಾವು ನಮ್ಮ ದೈನಂದಿನ ಓಟದಲ್ಲಿ ಇನ್ನುಳಿದವರ ಕಷ್ಟಗಳನ್ನು, ಅವರ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳಲು ಮರೆಯುತ್ತೇವೆ. ಆದರೆ ಒಂದು ಕಥೆ ಅಥವಾ ಕಾದಂಬರಿ ನಮಗೆ ಮತ್ತೊಬ್ಬರ ಬದುಕಿನೊಳಗೆ ಇಣುಕಿ ನೋಡುವ, ಅವರ ನೋವನ್ನು ನಮ್ಮದೇ ಎಂದು ಭಾವಿಸುವ ಶಕ್ತಿಯನ್ನು ನೀಡುತ್ತದೆ.
ಇಂದಿನ ಸಮಾಜದಲ್ಲಿ ಒಂಟಿತನ ಮತ್ತು ಜಾಲತಾಣಗಳ ಸುಳ್ಳು ಪ್ರಪಂಚದಲ್ಲಿ ಕಳೆದುಹೋಗುವಿಕೆಗೆ ಪುಸ್ತಕಗಳ ಓದು ಮತ್ತು ಭಾವನಾತ್ಮಕ ಒಡನಾಟವೇ ಮದ್ದಾಗಿದೆ. ಇದು ನಮ್ಮ ಮನಸ್ಸನ್ನು ನೈಜ ಪ್ರಪಂಚಕ್ಕೆ ತಂದು ನಿಲ್ಲಿಸುತ್ತದೆ. ಸಣ್ಣ ವಿಷಯಗಳಿಗೂ ತಾಳ್ಮೆ ಕಳೆದುಕೊಂಡು ಬಂಧಗಳನ್ನು ಮುರಿದುಕೊಳ್ಳುವ ಅಸಹನೆ ಮತ್ತು ಕೋಪಕ್ಕೆ ಮಹಾಕಾವ್ಯಗಳು ಹಾಗೂ ಹಿರಿಯರ ಬರಹಗಳು ಬದುಕಿನ ಏರಿಳಿತಗಳನ್ನು ಸಹಿಸುವ ಹದವನ್ನು ಕಲಿಸುತ್ತವೆ. ಮುಖಾಮುಖಿ ಮಾತನಾಡುವ ಕಲೆ ಸತ್ತುಹೋಗುತ್ತಿರುವ ಇಂದಿನ ಸಂವಹನದ ಕೊರತೆಗೆ ಸಾಹಿತ್ಯವು ಆಡುವ ಭಾಷೆಯನ್ನು ಚಂದವಾಗಿಸಿ, ಸಂಬಂಧಗಳ ನಡುವಿನ ಕಹಿಯನ್ನು ಕರಗಿಸುತ್ತದೆ.
ಕೃಷಿಕನೊಬ್ಬ ಮಣ್ಣಿನಲ್ಲಿ ಬೆವರು ಸುರಿಸುವ ಕಥೆಯಾಗಲಿ, ತಾಯಿಯೊಬ್ಬಳ ನಿಷ್ಕಲ್ಮಶ ಪ್ರೀತಿಯಾಗಲಿ, ಅಥವಾ ಹಳ್ಳಿಯ ಒಟ್ಟೂ ಜೀವನದ ಚಿತ್ರಣವಾಗಲಿ—ಇವೆಲ್ಲವೂ ನಮ್ಮನ್ನು ಮತ್ತೆ ಮಣ್ಣಿನ ಬೇರುಗಳಿಗೆ ಮತ್ತು ಮನುಷ್ಯತ್ವಕ್ಕೆ ಜೋಡಿಸುತ್ತವೆ.
### ಬೇರುಗಳಿಂದ ದೂರವಾಗುತ್ತಿರುವ ಭಾಷೆ
ಇವತ್ತು ನಾವು ಬಳಸುವ ಭಾಷೆಯೂ ಯಾಂತ್ರಿಕವಾಗುತ್ತಿದೆ. ಶುಭೋದಯ, ವಂದನೆ ಎನ್ನುವ ಆಪ್ತ ಮಾತುಗಳ ಮಧ್ಯೆ ಭಾಷೆಯಲ್ಲಿದ್ದ ಆತ್ಮೀಯತೆ ಮಾಯವಾಗುತ್ತಿದೆ. ನಾವು ನಮ್ಮ ಮಾತೃಭಾಷೆಯನ್ನು ಮತ್ತು ಸಾಹಿತ್ಯವನ್ನು ಎಷ್ಟು ದೂರ ಇಡುತ್ತೇವೆಯೋ, ಅಷ್ಟು ನಮ್ಮ ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳಿಂದ ದೂರವಾಗುತ್ತೇವೆ.
ನಮ್ಮ ಹಳೆಯ ಜಾನಪದ ಕಾವ್ಯಗಳನ್ನು ನೋಡಿ; ಅದರಲ್ಲಿ ಯಾವುದೇ ವಿಶ್ವವಿದ್ಯಾಲಯದ ಪದವಿ ಇಲ್ಲದ ತಾಯಂದಿರು ಹಾಡಿದ ತ್ರಿಪದಿಗಳಲ್ಲಿ ಇಡೀ ಬದುಕಿನ ಸಾರವಿತ್ತು. ಬೀಸುವ ಕಲ್ಲಿನ ಪದಗಳಲ್ಲಿ, ಸುಗ್ಗಿಹಾಡುಗಳಲ್ಲಿ ಶ್ರಮವನ್ನು ಮರೆಯುವ ಮತ್ತು ಇಡೀ ಊರೇ ಒಂದಾಗಿ ಬಾಳುವ ಸಾಮರಸ್ಯವಿತ್ತು. ಇವತ್ತು ನಮಗೆ ಬೇಕಾಗಿರುವುದು ಅದೇ ಸಾಮರಸ್ಯ. ಇದು ಭೂತಕಾಲ ಮತ್ತು ವರ್ತಮಾನವನ್ನು ಬೆಸೆಯುವ ಸೇತುವೆ. ನಮ್ಮ ಹಳೆಯ ತಲೆಮಾರಿನ ಅನುಭವದ ಬುತ್ತಿಯನ್ನು ಇಂದಿನ ಯುವ ಪೀಳಿಗೆಗೆ ದಾಟಿಸುವ ಅತ್ಯುತ್ತಮ ಮಾಧ್ಯಮ.
### ಮನುಷ್ಯತ್ವದ ತುರ್ತು ತಿದ್ದುಪಡಿ
ನಾವು ದಿನಾಲೂ ತಂತ್ರಜ್ಞಾನವನ್ನು ಹೊಸತುಗೊಳಿಸಿಕೊಳ್ಳುವ ಅವಸರದಲ್ಲಿದ್ದೇವೆ. ಆದರೆ ಅದರ ಜೊತೆಜೊತೆಗೇ ನಮ್ಮ ‘ಮನಸ್ಸನ್ನು’ ಮತ್ತು ‘ಮನುಷ್ಯತ್ವವನ್ನು’ ಸರಿಪಡಿಸಿಕೊಳ್ಳಬೇಕಾದ ತುರ್ತು ಇವತ್ತಿದೆ. ಅದಕ್ಕೆ ಸಾಹಿತ್ಯಕ್ಕಿಂತ ದೊಡ್ಡ ದಾರಿಯಿಲ್ಲ. ಸಾಹಿತ್ಯವು ಕೇವಲ ಅಕ್ಷರ ಜ್ಞಾನವಲ್ಲ, ಅದು ಬದುಕುವ ಕಲೆ.
ಮನೆಯಲ್ಲೊಂದು ಸಣ್ಣ ಪುಸ್ತಕದ ಕಪಾಟು ಇರಲಿ. ದಿನಕ್ಕೆ ಕೇವಲ ಹತ್ತು ನಿಮಿಷವಾದರೂ ಹಸ್ತಪರದೆಗಳನ್ನು ಪಕ್ಕಕ್ಕಿಟ್ಟು ಒಂದು ಚಂದದ ಕಥೆಯನ್ನೋ, ಕವಿತೆಯನ್ನೋ ಓದುವ ಹವ್ಯಾಸ ಬೆಳೆಸಿಕೊಳ್ಳೋಣ. ಮಕ್ಕಳಿಗೂ ಚಿಕ್ಕಂದಿನಿಂದಲೇ ಕಥೆಗಳನ್ನು ಓದುವ, ಕೇಳುವ ಹವ್ಯಾಸ ಮಾಡಿಸೋಣ. ಇದು ಅವರಲ್ಲಿ ಕೇವಲ ಬುದ್ಧಿವಂತಿಕೆಯನ್ನಷ್ಟೇ ಅಲ್ಲ, ನೈಜ ಮಾನವೀಯ ಮೌಲ್ಯಗಳನ್ನು ಬಿತ್ತುತ್ತದೆ.
### ಕೊನೆಯ ಮಾತು
ಜಗತ್ತು ಎಷ್ಟೇ ಆಧುನಿಕತೆಯ ಮುಖವಾಡ ಧರಿಸಲಿ, ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆಯ ಯಂತ್ರಗಳು ನಮಗಾಗಿ ಪ್ರೇಮಪತ್ರಗಳನ್ನೇ ಬರೆದುಕೊಟ್ಟರೂ ಆ ಪತ್ರದ ಹಿಂದಿನ ಆಪ್ತ 'ಭಾವನೆ'ಯನ್ನು ತುಂಬಲು ಅದಕ್ಕೆ ಎಂದಿಗೂ ಸಾಧ್ಯವಿಲ್ಲ. ನಮ್ಮ ಇಡೀ ದಿನಚರಿಯನ್ನು ಯಂತ್ರಗಳು ನಿಯಂತ್ರಿಸಬಹುದು; ಆದರೆ ಮನುಷ್ಯನ ಮೂಲಭೂತ ಹಸಿವು, ಪ್ರೀತಿಯ ಹಂಬಲ ಮತ್ತು ಒಂಟಿತನದ ಕಣ್ಣೀರು ಎಂದಿಗೂ ಬದಲಾಗಲಾರದು.
ನೆನಪಿರಲಿ, ಕೋಟಿ ರೂಪಾಯಿಯ ಮಹಾ ಯಂತ್ರ ಕೂಡ ಮತ್ತೊಬ್ಬರ ಕಣ್ಣೀರನ್ನು ಒರೆಸಲಾರದು, ಅದಕ್ಕೆ ಮನುಷ್ಯನ ಬೆಚ್ಚಗಿನ ಹಸ್ತವೇ ಬೇಕು. ಆ ಹಸ್ತಕ್ಕೆ ಕರುಣೆಯ ಸ್ಪರ್ಶ ನೀಡುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ. ದಿನಾಲೂ ಸವೆದು ತೇದುಹೋಗುತ್ತಿರುವ ನಮ್ಮೊಳಗಿನ ಸಂಬಂಧಗಳ ಬೇರುಗಳಿಗೆ ಸಾಹಿತ್ಯವೆಂಬ ಜೀವಜಲವನ್ನು ಉಣಿಸೋಣ. ನಮ್ಮ ಮಾತುಗಳು ಸರಳವಾಗಿರಲಿ, ಭಾವನೆಗಳು ನೈಜವಾಗಿರಲಿ, ಸಂಬಂಧಗಳು ಮಣ್ಣಿನಷ್ಟೇ ಗಟ್ಟಿಯಾಗಿರಲಿ. ಅಕ್ಷರಗಳನ್ನು ಪ್ರೀತಿಸುವ ಕಣ್ಣುಗಳು, ಮನುಷ್ಯತ್ವವನ್ನು ಗೌರವಿಸುವ ಹೃದಯಗಳು ನಮ್ಮದಾದಾಗ ಮಾತ್ರ ಈ ಭೂಮಿಯ ಮೇಲಿನ ಮನುಜ ಬದುಕು ಸ್ವಸ್ಥ ಹಾಗೂ ಸುಂದರ!
**✍️ ದಯಾನಂದ ರೈ ಕಳ್ವಾಜೆ**




0 Comments