ಮೂಡುಬಿದಿರೆ: ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಕ್ಷಣಿಕ ಸಂತೋಷ ಅಥವಾ ಒತ್ತಡ ನಿವಾರಣೆಯ ನೆಪದಲ್ಲಿ ಆರಂಭವಾಗಿ ಕ್ರಮೇಣ ವ್ಯಸನವಾಗಿ ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂದು ಮೂಡುಬಿದಿರೆ ಧವಲಾ ಕಾಲೇಜಿನ ಉಪನ್ಯಾಸಕಿ ಮಲ್ಲಿಕಾ ರಾವ್ ಹೇಳಿದರು.
ಅವರು ಮಿಜಾರು ಬಂಗಬೆಟ್ಟು ಕೆಪಿಎಸ್ ಪ್ರೌಢಶಾಲೆ ವಿಭಾಗದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಸನಗಳು ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಯಾಗಿದೆ.
ಒತ್ತಡ ಅಥವಾ ದುಃಖಗಳಿಂದ ಪಾರಾಗಲು ಮದ್ಯ ಅಥವಾ ಮಾದಕ ವಸ್ತುಗಳು ಪರಿಹಾರವಲ್ಲ. ಕ್ರೀಡೆ, ಪುಸ್ತಕ ಓದು, ಸಂಗೀತ, ಸಮಾಜಸೇವೆ ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವಂತಹ ಆರೋಗ್ಯಕರ ಚಟುವಟಿಕೆಗಳು ಶಾಶ್ವತ ಸಂತೋಷ ನೀಡುತ್ತವೆ. ಆರೋಗ್ಯವಂತ ಸಮಾಜ ಮತ್ತು ವ್ಯಸನಮುಕ್ತ ಯುವಜನತೆಯನ್ನು ನಿರ್ಮಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ನಾಗವೇಣಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಪುತ್ತಿಗೆ ವಲಯದ ಮೇಲ್ವಿಚಾರಕಿ ಮಮತಾ, ಅಶ್ವಿನಿ ಹಾಗೂ ರಾಮಚಂದ್ರ ಶೆಟ್ಟಿ, ಪದಾಧಿಕಾರಿ ಅಶ್ವಿನಿ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.


0 Comments