ಮೂಡುಬಿದಿರೆ : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ಅಧ್ಯಕ್ಷತೆತೆಯಲ್ಲಿ
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ 2026-29ನೇ ಸಾಲಿನ ಕಂಬಳ ಋತುವಿನ ದಿನಾಂಕಗಳ ಕುರಿತು ಚರ್ಚೆ ನಡೆಸಿ ತಾತ್ಕಾಲಿಕ ವೇಳಾಪಟ್ಟಿಯ ರೂಪರೇಷೆ ಸಿದ್ಧಪಡಿಸಲಾಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ಮುನ್ನಡೆಸುವ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಮಟ್ಟದ ಅಧಿಕೃತ ಕಂಬಳಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ಸಲ್ಲಿಕೆಯಾಗಿರುವ ಹೊಸ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಂಬಳದ ಓಟಗಾರರು, ತೀರ್ಪುಗಾರರು ಹಾಗೂ ಪರಿಚಾರಕರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ಸರ್ಕಾರದ ಅನುದಾನಕ್ಕಾಗಿ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸುಮಾರು 15 ಬಾರಿ ಬೆಂಗಳೂರಿಗೆ ಭೇಟಿ ನೀಡಿ ಅಶೋಕ್ ಕುಮಾರ್ ರೈ, ಐವನ್ ಡಿಸೋಜ ಹಾಗೂ ಸುನಿಲ್ ಕುಮಾರ್ ಅವರ ಸಹಕಾರದೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವರಾಗಿದ್ದ ಎಚ್.ಕೆ. ಪಾಟೀಲ್ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಅವರನ್ನು ಭೇಟಿ ಮಾಡಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ.ಪ್ರವಾಸೋದ್ಯಮ ಇಲಾಖೆಯಿಂದ ಕೇವಲ 10 ಕಂಬಳಗಳಿಗೆ ತಲಾ 5 ಲಕ್ಷ ರೂ. ಅನುದಾನ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಕ್ರೀಡಾ ಇಲಾಖೆಯಿಂದ ಬಿಡುಗಡೆಯಾದ 40 ಲಕ್ಷ ರೂ. ಅನುದಾನವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಮಾನವಾಗಿ ಹಂಚುವಂತೆ ಮನವಿ ಮಾಡಲಾಗಿದೆ. ಪಟ್ಲ ಫೌಂಡೇಶನ್ ಮೂಲಕ ಕಂಬಳ ಪರಿಚಾರಕರು, ತೀರ್ಪುಗಾರರು ಹಾಗೂ ಓಟಗಾರರಿಗೆ ವಿಮಾ ಸೌಲಭ್ಯ ಕಲ್ಪಿಸುವ ಉದ್ದೇಶವೂ ಇದೆ ಎಂದರು.
ಈ ಬಾರಿ ಮೈಸೂರು ದಸರಾದ ಅಂಗವಾಗಿ ಕಂಬಳ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದು, ಅಕ್ಟೋಬರ್ 17 ಮತ್ತು 18ರಂದು ಕಂಬಳ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.
ಕರಾವಳಿ ಭಾಗದ ಸಂಸ್ಕೃತಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಕಂಬಳವನ್ನು ಪ್ರವಾಸೋದ್ಯಮದ ಬ್ರ್ಯಾಂಡ್ ಆಗಿ ಬೆಳೆಸುವ ಯೋಜನೆ ರೂಪಿಸಲಾಗುತ್ತಿದೆ. ಮರವಂತೆ ಬೀಚ್, ಕಾಪು ಮತ್ತು ತಣ್ಣೀರುಬಾವಿ ಪ್ರದೇಶಗಳಲ್ಲಿ ಕಂಬಳ ಲಾಂಛನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದ ಕಂಬಳಕ್ಕೆ ವಾರ್ಷಿಕ 5 ಕೋಟಿ ರೂ. ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಬಾರಿ ಡಿಸೆಂಬರ್ 26ರಂದು ಸಾಂಪ್ರದಾಯಿಕ ಕಂಬಳ ನಡೆಯಲಿದ್ದು, ಹರೇಕಳ, ಸಾಣೂರು ಹಾಗೂ ಬಡಗಬೆಟ್ಟು ಕಂಬಳಗಳ ಆಯೋಜನೆಗೂ ಸಿದ್ಧತೆ ನಡೆದಿದೆ. ಪಿಲಿಕುಳ ಕಂಬಳಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯದ ಕುರಿತು ಶೀಘ್ರದಲ್ಲೇ ಸ್ಪಷ್ಟ ಆದೇಶ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಕಂಬಳ ಸಮಿತಿಯಿಂದ ನಡೆದ ಕೆಲವೊಂದು ಲೋಪದೋಷಗಳ ಬಗ್ಗೆ ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ ಅವರು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಸಭೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರ ಶಾಂತರಾಮ್ ಶೆಟ್ಟಿ, ಉಪ್ಪಿನಂಗಡಿ ಕಂಬಳದ ಸ್ಥಾಪಕ ಅಧ್ಯಕ್ಷ ಉಮೇಶ್ ಶಣೈ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
_______________
2026-27ನೇ ಸಾಲಿನ ಕಂಬಳ ವೇಳಾಪಟ್ಟಿ:
ಅಕ್ಟೋಬರ್ 17- ಮೈಸೂರು
ನವೆಂಬರ್ 14 – ಪಣಪಿಲ
ನವೆಂಬರ್ 21 – ಕೊಡಂಗೆ
ನವೆಂಬರ್ 28 – ಕಕ್ಕೆಪದವು
ಡಿಸೆಂಬರ್ 5 – ಹೊಕ್ಕಾಡಿ
ಡಿಸೆಂಬರ್ 6 – ಬಳ್ಳಮಂಜ
ಡಿಸೆಂಬರ್ 12 – ಬಾರಾಡಿ
ಡಿಸೆಂಬರ್ 19 – ಮಂಗಳೂರು
ಡಿಸೆಂಬರ್ 26 – ಮೂಲ್ಕಿ
ಜನವರಿ 2 – ಮಿಯ್ಯಾರು
ಜನವರಿ 9 – ನರಿಂಗಾನ
ಜನವರಿ 16 – ಅಡ್ವೆ
ಜನವರಿ 23 – ಮೂಡುಬಿದಿರೆ
ಜನವರಿ 30 – ಐಕಳ
ಫೆಬ್ರವರಿ 6 – ಪುತ್ತೂರು
ಫೆಬ್ರವರಿ 13 – ಜಪ್ಪಿನಮೊಗರು
ಫೆಬ್ರವರಿ 20 – ವಾಮಂಜೂರ್
ಫೆಬ್ರವರಿ 27 – ಎರ್ಮಾಳ್
ಮಾರ್ಚ್ 6 – ಬಂಟ್ವಾಳ
ಮಾರ್ಚ್ 13 – ಬಂಗಾಡಿ
ಮಾರ್ಚ್ 20 – ವೇಣೂರು
ಮಾರ್ಚ್ 27 – ಉಪ್ಪಿನಂಗಡಿ
ಏಪ್ರಿಲ್ 3 – ಗುರುಪುರ
ಏಪ್ರಿಲ್ 10 – ಬಳ್ಕುಂಜೆ
ಏಪ್ರಿಲ್ 17 – ಹರೇಕಳ
ಏಪ್ರಿಲ್ 24 – ಬಡಗಬೆಟ್ಟು
( ಸಾಣೂರು, ಕಡಂದಲೆ, ಸಸಿಹಿತ್ಲು, ಬೈಂದೂರು, ಶಿರ್ವ ಕಂಬಳಗಳಿಗೆ ಇನ್ನು ದಿನ ನಿಗದಿಯಾಗಬೇಕಾಗಿದೆ)


0 Comments