ಮೂಡುಬಿದಿರೆ : ಕರಿಂಜೆ, ಕಲ್ಲಬೆಟ್ಟು, ಕೋಟೆಬಾಗಿಲು, ಮಾರೂರು, ಸುವಣ೯ನಗರ ಹಾಗೂ ಪ್ರಾಂತ್ಯ ಮುಂತಾದ ಕಡೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಕರೆಂಟ್ ಇಲ್ಲದಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದ್ದು ಅಡಿಗೆ ಮಾಡಲು,ಟಾಯ್ಲೆಟ್, ಬಾತ್ ರೂಮ್ ಗಳಿಗೆ ನೀರು ಇಲ್ಲದಂತ್ತಾಗಿದೆ ಕರೆಂಟ್ ಯಾವಾಗ ಬರುತ್ತದೆ ಎಂದು ಕೇಳಲು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ ಆಕ್ರೋಶಿತ ಸಾವ೯ಜನಿಕರು ಬುಧವಾರ ರಾತ್ರಿ ಮೂಡುಬಿದಿರೆ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅಶ್ರಫ್ ಮರೋಡಿ ಅವರು "ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಇದೆ. ಈ ಹಿಂದೆಯೇ ಕೋಟೆಬಾಗಿಲು ಭಾಗದಲ್ಲಿ ಲೋ ವೋಲ್ಟೇಜ್ ಮತ್ತು ತಂತಿ ಉರಿದು ಹೋಗಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಲ್ ವಸೂಲಿ ಮಾಡಲು ಬರುವ ಅಧಿಕಾರಿಗಳಿಗೆ ಜನರ ಸಂಕಷ್ಟಗಳು ಕಾಣುತ್ತಿಲ್ಲ," ಎಂದು ಆರೋಪಿಸಿದರು..
ಶಾಸಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಯಿತು. ಅಧಿಕಾರಿಗಳು ಜನರ ಕರೆಗಳನ್ನು ಸ್ವೀಕರಿಸದೆ ಇರುವುದು ಅಥವಾ ನಂಬರ್‌ಗಳನ್ನು ಬ್ಲಾಕ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಸಂಕಷ್ಟವನ್ನು ಹೀಗೆ ಹಂಚಿಕೊಂಡಿದ್ದಾರೆ. "ಮನೆಯಲ್ಲಿ ನಾಲ್ಕು ದಿನಗಳಿಂದ ನೀರಿಲ್ಲದೆ ಶೌಚಾಲಯಕ್ಕೂ ತೊಂದರೆಯಾಗಿದೆ. ಅಡುಗೆ ಮಾಡಲು, ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕತ್ತಲೆಯಲ್ಲಿ ಕಳೆಯುವುದು ಕಷ್ಟಕರವಾಗಿದೆ. ಅಧಿಕಾರಿಗಳನ್ನು ಕೇಳಿದರೆ ಮರ ಬಿದ್ದಿದೆ, ಕಂಬ ಕಟ್ ಆಗಿದೆ ಎಂಬ ಸಬೂಬುಗಳನ್ನು ನೀಡುತ್ತಿದ್ದಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ ಎಂದಿದ್ದಾರೆ.
ರಾತ್ರಿ 10 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು. ಒಂದು ವೇಳೆ ನಾಳೆ ಬೆಳಿಗ್ಗೆ 10:30ರ ಒಳಗೆ ಶಾಶ್ವತ ಪರಿಹಾರ ಸಿಗದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪುರಸಭೆಯ ಮಾಜಿ ಸದಸ್ಯರುಗಳಾದ ಸುರೇಶ್ ಕೋಟ್ಯಾನ್ ಇಕ್ಬಾಲ್ ಕರೀಂ ಮತ್ತು ಸುರೇಶ್ ಪ್ರಭು ಅವರು ಈ ಸಂದಭ೯ದಲ್ಲಿದ್ದರು.


0 Comments