ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ

ಜಾಹೀರಾತು/Advertisment
ಜಾಹೀರಾತು/Advertisment
ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ
ಮೂಡುಬಿದಿರೆ: ಸಮಾಜಮುಖಿ ಚಿಂತನೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯ ಸಾರ್ಥಕ ಉದಾಹರಣೆಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಂಗಳೂರಿನ ನಿರಾಶ್ರಿತ ಮಕ್ಕಳ ಆಶ್ರಯತಾಣ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ₹50 ಸಾವಿರಕ್ಕೂ ಅಧಿಕ ಮೌಲ್ಯದ ದೈನಂದಿನ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ “ವೈವಿಧ್ಯತೆಯಲ್ಲಿ ಏಕತೆ” ಎಂಬ ಸಂದೇಶದೊಂದಿಗೆ ಸಂಪ್ರದಾಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಾಂಪ್ರದಾಯಿಕ ಆಹಾರ ಮೇಳ ಹಾಗೂ ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.

ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೂ ಕೈಜೋಡಿಸುವ ಉದ್ದೇಶದಿಂದ ಆಹಾರ ಮೇಳದಿಂದ ಸಂಗ್ರಹವಾದ ಮೊತ್ತವನ್ನು ಪ್ರತೀ ವರ್ಷದಂತೆ ಸಮಾಜಮುಖಿ ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಯಿತು. ಕಳೆದ ವರ್ಷದ ಟ್ರೆಡಿಷನಲ್ ಡೇ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಸುಮಾರು ₹1 ಲಕ್ಷ ಮೊತ್ತವನ್ನು ಮಣಿಪುರ ಸಂಘರ್ಷದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವಿನ ರೂಪದಲ್ಲಿ ನೀಡಲಾಗಿತ್ತು.

ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿ ಮಂಗಳೂರಿನ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ಮಕ್ಕಳ ಅಗತ್ಯಗಳಿಗೆ ತಕ್ಕ ಸಾಮಗ್ರಿಗಳನ್ನು ವಿತರಿಸಲಾಯಿತು.

“ಶಿಕ್ಷಣವು ಕೇವಲ ಪಠ್ಯಜ್ಞಾನಕ್ಕೆ ಸೀಮಿತವಾಗಿರದೆ, ಸಮಾಜದ ನೋವಿಗೆ ಸ್ಪಂದಿಸುವ ಮನಸ್ಸನ್ನು ರೂಪಿಸಬೇಕು. ಸಂಪ್ರದಾಯ ದಿನಾಚರಣೆಯ ಮೂಲಕ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿತುಕೊಳ್ಳುವುದರ ಜೊತೆಗೆ ಸಮಾಜದತ್ತ ತಮ್ಮ ಹೊಣೆಗಾರಿಕೆಯನ್ನು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಈ ಮನೋಭಾವ ಯುವಜನರಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತದೆ.”
— ವಿವೇಕ್ ಆಳ್ವ

Post a Comment

0 Comments