ಮೂಡುಬಿದಿರೆ: ಜೈನ ಧರ್ಮದ ತತ್ವಗಳು ಇಡೀ ಮಾನವಕುಲದ ಕಲ್ಯಾಣವನ್ನು ಬಯಸುತ್ತವೆ. ಆದಿನಾಥರಿಂದ ಮಹಾವೀರರವರೆಗೆ ಬೆಳೆದು ಬಂದ ಶ್ರಮಣ ಪರಂಪರೆಯು ಇಂದ್ರಿಯ ನಿಗ್ರಹ ಮತ್ತು ಮನಸ್ಸಿನ ನಿಯಂತ್ರಣದ ಮೂಲಕ ಮೋಕ್ಷ ಪಡೆಯುವ ಹಾದಿಯನ್ನು ತೋರಿಸಿಕೊಟ್ಟಿದೆ. ಧರ್ಮವು ವ್ಯಕ್ತಿಯ ಆಚಾರ ಮತ್ತು ವಿಚಾರಗಳನ್ನು ಸುಸ್ಥಿತಿಯಲ್ಲಿಡುತ್ತದೆ ಎಂದು ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಮೂಡುಬಿದಿರೆ ಸಾವಿರ ಕಂಬದ ಬಸದಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರಮಣ ಸಂಸ್ಕೃತಿ ಸಮ್ಮೇಳನದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಡಿಜಿಟಲ್ ಮಾಧ್ಯಮಗಳು ದ್ವೇಷ ಹರಡುವ ಟೀಕೆಗಳಿಗೆ ಅವಕಾಶ ನೀಡದೆ ಸಮಾಜವನ್ನು ಸುಸಂಸ್ಕೃತಗೊಳಿಸುವ ಕೆಲಸ ಮಾಡಬೇಕು ಎಂದರು.
ಚೌಟರ ಅರಮನೆಯ ವೃಂದಾ ರಾಜೇಂದ್ರ ಶ್ರಮಣ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿದರು.
ನಿವೃತ್ತ ಪ್ರಾಧ್ಯಾಪಕ ಅಜಿತ್ ಪ್ರಸಾದ್ ಧಾರ್ಮಿಕ ಉಪನ್ಯಾಸ ನೀಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಆಚರಣೆಗಳು ನಡೆದಾಗ ಮಾತ್ರ ಆತ್ಮಶುದ್ಧಿ ಸಾಧ್ಯ. ಪೂಜೆ, ರಥೋತ್ಸವಗಳ ಹಿಂದಿರುವ ತಾತ್ವಿಕ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಯಬೇಕು. ಮನಸ್ಸಿನ ನಿಜವಾದ ಅಲಂಕಾರವು ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಸಾಧ್ಯ.ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಧರ್ಮ ಮತ್ತು ಶಾಸ್ತ್ರಗಳ ಕುರಿತು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ತಡೆಗಟ್ಟಲು ಪರಂಪರೆಯ ಬಗ್ಗೆ ಸರಿಯಾದ ಅರಿವಿರಬೇಕು ಎಂದರು.
ಕೆ.ಪಿ. ಜಗದೀಶ್ ಅಧಿಕಾರಿ ಶ್ರಮಣ ಜ್ಯೋತಿ ಬೆಳಗಿಸಿದರು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್, ಆದರ್ಶ್, ಪ್ರಮುಖರಾದ ಜಯರಾಜ್ ಕಾಂಬ್ಳಿ, ವಿ.ಕೆ. ಜೈನ್, ಪುತ್ತೂರು ಅರಮನೆ ವೀರೇಂದ್ರ ಉಪಸ್ಥಿತರಿದ್ದರು. ಸಂಜಯಂತ ಕುಮಾರ್ ವಂದಿಸಿದರು. ಸಭೆಯ ನಂತರ ಹಿರಿಯ ರಥೋತ್ಸವ ಜರುಗಿತು.


0 Comments