ಅಕ್ರಮ ಮರಳುಗಾರಿಕೆ ತಡೆಯಲು ಡಿಸಿಗೆ ಮನವಿ ಮಾಡಿದ ಮಾರೂರು, ಪುಚ್ಚೆಮೊಗರು ರೈತರು

ಜಾಹೀರಾತು/Advertisment
ಜಾಹೀರಾತು/Advertisment
ಅಕ್ರಮ ಮರಳುಗಾರಿಕೆ ತಡೆಯಲು ಡಿಸಿಗೆ ಮನವಿ ಮಾಡಿದ ಮಾರೂರು, ಪುಚ್ಚೆಮೊಗರು ರೈತರು
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ನೆತ್ತೋಡಿ ಬಳಿ ಹರಿಯುವ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾರೂರು ಮತ್ತು ಪುಚ್ಚೆಮೊಗರು ಗ್ರಾಮ ಸಮಿತಿಯ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಬುಧವಾರ ಮನವಿ ನೀಡಿದರು.

ಮಾರೂರು ಮತ್ತು ಪುಚ್ಚೆಮೊಗರು ಪರಿಸರದ ಸುಮಾರು 250ಕ್ಕೂ ಹೆಚ್ಚು ರೈತ ಕುಟುಂಬಗಳು ಕುಡಿಯುವ ನೀರು ಹಾಗೂ ಕೃಷಿಗಾಗಿ ಫಲ್ಗುಣಿ ನದಿಯನ್ನು ಅವಲಂಬಿಸಿವೆ. ಕಳೆದ ಕೆಲವು ವರ್ಷಗಳಿಂದ ಮರಳು ಮಾಫಿಯಾದವರು ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿ ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದರು.

ಗಣಿ ಇಲಾಖೆಯು ಈ ಭಾಗದಲ್ಲಿ ಮರಳು ತೆಗೆಯಲು ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಆದರೂ ಕೆಲವು ವ್ಯಕ್ತಿಗಳು ಸರ್ಕಾರಿ ಯೋಜನೆಗಳಿಗೆ ಮರಳು ಪೂರೈಕೆ ಮಾಡುವ ನೆಪವೊಡ್ಡಿ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ನದಿಯ ನೀರಿನ ಸೆಲೆ ಕಡಿಮೆಯಾಗಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಉಂಟಾಗಿದೆ. ನದಿ ತೀರದಲ್ಲಿ ಯಂತ್ರ ಬಳಸಿ ಆಳವಾಗಿ ಅಗೆಯುವುದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ.

ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಇದೇ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಮರಳುಗಾರಿಕೆಯಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಮರಳುಗಾರಿಕೆಗೆ ಅನುಮತಿ ನೀಡುವ ಮೊದಲು ಪುರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದರು. ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಡ್ವಿನ್ ಡಿಸೋಜಾ, ರೋಹನ್ ಕಾರ್ಡೋಜಾ, ಪ್ರಮುಖರಾದ ಜಾಯ್ಲಸ್ ತಾಕೋಡೆ ಹಾಗೂ ಸಂಘದ ಸದಸ್ಯರು ಆಗ್ರಹಿಸಿದರು.

Post a Comment

0 Comments