ಮಂಗಳೂರು ವಿ.ವಿ. ಉಡುಪಿ ವಲಯ ಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿ ಸಂಪನ್ನ

ಜಾಹೀರಾತು/Advertisment
ಜಾಹೀರಾತು/Advertisment
ಮಂಗಳೂರು ವಿ.ವಿ. ಉಡುಪಿ ವಲಯ ಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿ ಸಂಪನ್ನ
ಮೂಡುಬಿದಿರೆ: ಇಲ್ಲಿಯ ಶ್ರೀ ಮಹಾವೀರ ಕಾಲೇಜಿನ ಜಿ.ವಿ. ಪೈ. ಕ್ರೀಡಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಉಡುಪಿ ವಲಯ ಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತನ್ನ ಎದುರಾಳಿ ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತು.

ನಿಗದಿತ ೨೦ ಓವರ್‌ಗಳ ಈ ಪಂದ್ಯದಲ್ಲಿ ಸಮಬಲದ ಹೋರಾಟ ನಡೆದು, ಸೂಪರ್ ಓವರ್‌ನಲ್ಲಿ ಆಳ್ವಾಸ್ ತಂಡ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ತಂಡ ದ್ವಿತೀಯ ಸ್ಥಾನ ಗಳಿಸಿತು. ಶ್ರೀ ಮಹಾವೀರ ಕಾಲೇಜು ಮೊದಲ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡರೆ, ಶಿರ್ವದ ಸೈಂಟ್ ಮೇರೀಸ್ ಕಾಲೇಜು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆಯಿತು.
ಜಿ. ವಿ. ಪೈ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ವಲಯಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಅಬ್ಸರ್ವರ್ ಆಗಿ ಕಾರ್ಯನಿರ್ವಹಿಸಿದ ರತ್ನಾಕರ ಪುತ್ರಾಯ ಅವರು ಈ ಪಂದ್ಯಾವಳಿಯ ಕುರಿತು ವರದಿ ವಾಚಿಸಿದರು. ಈ ಕ್ರಿಕೆಟ್ ಪಂದ್ಯಾವಳಿಯ ಸಂಚಾಲಕರಾದ ಮಹಾವೀರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಅಕ್ಷಿತ್ ರೈ ಈ ಪಂದ್ಯಾವಳಿಯ ಬಹುಮಾನಿತರ ಪಟ್ಟಿ ವಾಚಿಸಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಮಾತನಾಡಿ "ತಂಡದ ಒಗ್ಗಟ್ಟನ್ನು ಹೆಚ್ಚಿಸಿ ವಿಭಿನ್ನ ಕೌಶಲ್ಯಗಳನ್ನು ಬೆಳೆಸುವ ಕ್ರಿಕೆಟ್ ನಮ್ಮ ಯುವಜನತೆಯ ನೆಚ್ಚಿನ ಆಟವಾಗಿದೆ ಜೊತೆಗೆ ವ್ಯಕ್ತಿಯ ಮನೋ-ದೈಹಿಕ ಅರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕ್ರಿಕೆಟ್ ಸಹಾಯಕವಾಗಿದೆ” ಎನ್ನುತ್ತಾ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿದವರನ್ನು ಮತ್ತು ವಿಜೇತರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ. ಹರಿದಾಸ್, ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ರವಿ ಪೆರೇರಾ, ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಧನಂಜಯ ಶೆಟ್ಟಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ., ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.
ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿದರು, ಅಂತಿಮ ಬಿ. ಎಸ್ಸಿ ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Post a Comment

0 Comments