ಮೂಡುಬಿದಿರೆ : ಸ್ವಚ್ಛ ಭಾರತ ಮಿಷನ್ ಹಾಗೂ ನಗರಾಭಿವೃದ್ಧಿ ಇಲಾಖೆಯಡಿಯಲ್ಲಿ ಮೂಡುಬಿದಿರೆ ಪುರಸಭೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಾರಿಯಿಂದ ಸ್ವಚ್ಛತೆಗೆ ಮುನ್ನುಡಿ ಅಭಿಯಾನ ಕಾರ್ಯಕ್ರಮ ಶುಕ್ರವಾರ ಸಮಾಜ ಮಂದಿರ ಸಭಾಭವನದಲ್ಲಿ ಆಯೋಜಿಸಲಾಯಿತು.
ಮಹಿಳಾ ಪೌರಕಾರ್ಮಿಕರು (ಸಫಾಯಿ ಮಿತ್ರರು), ಪುರಸಭೆ ಅಧಿಕಾರಿಗಳು, ಕಮ್ಯುನಿಟಿ ಮೊಬಿಲೈಸರ್‌ಗಳು ಹಾಗೂ ಅಮೃತ ಮಿತ್ರ ಯೋಜನೆಯ ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅಧ್ಯಕ್ಷತೆ ವಹಿಸಿದರು.
ಆಳ್ವಾಸ್ ವೈದ್ಯಕೀಯ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಚೇತನಾ ಕೋಡ್ಲಿ, ಪ್ರಜನನ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ಸ್ವಚ್ಛತೆಯ ಅಭ್ಯಾಸಗಳನ್ನು ಪಾಲಿಸುವುದು ಅಗತ್ಯ. ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ.
ಪ್ರಜನನ ಆರೋಗ್ಯದ ಕುರಿತು ಸರಿಯಾದ ಮಾಹಿತಿ ಮತ್ತು ಜಾಗೃತಿ ಇದ್ದರೆ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಸ್ವಚ್ಛ ಸರ್ವೇಕ್ಷಣೆ 2025-26ರಲ್ಲಿ ನಾಗರಿಕ ಅಭಿಪ್ರಾಯದ ಮಹತ್ವದ ಕುರಿತು ಪರಿಸರ ಅಭಿಯಂತರ ಶಿಲ್ಪಾ ಎಸ್. ಜಾಗೃತಿ ಮೂಡಿಸಿದರು. ಕಚೇರಿ ವ್ಯವಸ್ಥಾಪಕಿ ಯಶಸ್ವಿನಿ, ಡಿಜಿಟಲ್ ಸಾಕ್ಷರತೆ ಕುರಿತು ಅರಿವು ಮೂಡಿಸಿದರು. ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಅವರು ಪೌರಕಾರ್ಮಿಕರ ಕೆಲಸದ ಸ್ಥಳದಲ್ಲಿ ಸುರಕ್ಷತೆ ಕುರಿತು ತರಬೇತಿ ನೀಡಿದರು. ಸಮುದಾಯ ಸಂಘಟಕ ಪ್ರಸನ್ನ ಕುಮಾರ್ ಅವರು ಹಣಕಾಸು ಸಾಕ್ಷರತೆ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು.
12 ಮಂದಿ ಮಹಿಳಾ ಸಫಾಯಿ ಮಿತ್ರರು ಹಾಗೂ 12 ಮಂದಿ ಅಮೃತ ಮಿತ್ರ 2.0 ಪಾರ್ಕ್ ನಿರ್ವಾಹಕರನ್ನು ಶಾಲು ಹೊದಿಸಿ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಂದಾಯ ಅಧಿಕಾರಿ ಜ್ಯೋತಿ ಎಚ್. ಉಪಸ್ಥಿತರಿದ್ದರು.
ಕಮ್ಯುನಿಟಿ ಮೊಬಿಲೈಸರ್‌ಗಳಾದ ಆಶಾ, ಅಮಿತಾ, ಚಂದ್ರಿಕಾ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪೂರ್ಣಿಮಾ ಮತ್ತು ಫೌಝಿಯ ಅತಿಥಿಗಳನ್ನು ಗೌರವಿಸಿದರು. ಕಮ್ಯೂನಿಟಿ ಮೊಬಿಲೈಸರ್ ಆಶಾ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ವಂದಿಸಿದರು.
ವಿವಿಧ ಕ್ರೀಡಾ ಚಟುವಟಿಕೆಗಳನ್ನು ಕಂದಾಯ ಅಧಿಕಾರಿ ಜ್ಯೋತಿ ಹೆಚ್. ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮವಾಗಿ ನಡೆಸಲಾಯಿತು.


0 Comments