ಉಡುಪಿ ಕರಂಬಳ್ಳಿ ದೇಗುಲದಲ್ಲಿ ಋಕ್ ಸಂಹಿತಾ ಯಾಗ

ಜಾಹೀರಾತು/Advertisment
ಜಾಹೀರಾತು/Advertisment
ಉಡುಪಿ ಕರಂಬಳ್ಳಿ ದೇಗುಲದಲ್ಲಿ ಋಕ್ ಸಂಹಿತಾ ಯಾಗ
ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ 2026 ಏಪ್ರಿಲ್ 3 ರಿಂದ 11ರವರೆಗೆ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಸಭೆ ನಡೆಯಿತು.
ಉಡುಪಿಯ ನಿಕಟಪೂರ್ವ ಶಾಸಕರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲೋಕ ಕ್ಷೇಮ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಯನ್ನು ಉದ್ದೇಶಿಸಿಕೊಂಡು ನಡೆಯಲಿರುವ ಈ ಮಹತ್ವದ ಯಾಗದ ಪುಣ್ಯ ಕಾಲದಲ್ಲಿ ದೇವಾಲಯದ ಸನ್ನಿಧಿಯಲ್ಲಿ ಶ್ರೀ ರಾಮ ತಾರಕ ಮಂತ್ರದ ಪಠಣ ಹಾಗೂ ಭಕ್ತ ಸಮೂಹದಿಂದ ಲಕ್ಷ ಪ್ರದಕ್ಷಿಣೆ ಸಂಕಲ್ಪ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿ ಪ್ರತಿದಿನ ನೂರಾರು ಭಕ್ತರು ಭಾಗವಹಿಸುವ ಮೂಲಕ ಈ ಮಹಾಸಂಕಲ್ಪವನ್ನು ಯಶಸ್ವಿಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಯಿತು. 
“ಶ್ರೀ ರಾಮ ತಾರಕ ಮಂತ್ರ” ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಹಾಗೂ ಶಕ್ತಿಯುತ ಮಂತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ರಾಮನ ದಿವ್ಯನಾಮವನ್ನು ಭಕ್ತಿಭಾವದಿಂದ ಜಪಿಸುವುದರಿಂದ ಮನಸ್ಸಿಗೆ ಶಾಂತಿ, ಆತ್ಮಶುದ್ಧಿ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ಮಂತ್ರದ ಪಠಣವು ಭಕ್ತರಲ್ಲಿ ಭಕ್ತಿ, ಸಾತ್ವಿಕತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವ ಪವಿತ್ರ ಸಾಧನೆಯಾಗಿದೆ.
ಈ ಹಿನ್ನೆಲೆಯಲ್ಲಿ ಯಾಗದ ಅವಧಿಯಲ್ಲಿ ಭಕ್ತರು ಸಾಮೂಹಿಕವಾಗಿ ರಾಮ ತಾರಕ ಮಂತ್ರ ಪಠಣ ನಡೆಸಿ, ದೇವಾಲಯದ ಪ್ರಾಕಾರದಲ್ಲಿ ಪ್ರದಕ್ಷಿಣೆ ಮಾಡುವ ಮೂಲಕ ಲಕ್ಷ ಪ್ರದಕ್ಷಿಣೆ ಸಂಕಲ್ಪವನ್ನು ಪೂರ್ಣಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ.

Post a Comment

0 Comments