*ಅನುಭವಗಳಿಗೆ ಅಕ್ಷರ ರೂಪದಿಂದ ಸಾಹಿತ್ಯ ಶ್ರೀಮಂತ: ಕಲ್ಲೂರು ನಾಗೇಶ್*

ಜಾಹೀರಾತು/Advertisment
ಜಾಹೀರಾತು/Advertisment
*ಅನುಭವಗಳಿಗೆ ಅಕ್ಷರ ರೂಪದಿಂದ ಸಾಹಿತ್ಯ ಶ್ರೀಮಂತ: ಕಲ್ಲೂರು ನಾಗೇಶ್* 
ಮೂಡುಬಿದಿರೆಯಲ್ಲಿ ಪದ್ಮಾವತಿ ಪಂಡಿತ್, ಅಹಿತಾನಲರ ಕೃತಿಗಳ ಲೋಕಾರ್ಪಣೆ

ಮೂಡುಬಿದಿರೆ: ಪುಸ್ತಕಗಳು ಜ್ಞಾನದ ಜತೆಗೆ ಸತ್ಯ, ವಿವೇಕವನ್ನೂ ಹುಟ್ಟುಹಾಕುತ್ತವೆ. ತಂತ್ರಜ್ಞಾನ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಇದರ ಮೂಲಕ ಜ್ಞಾನ ಹೆಚ್ಚಿನವರಿಗೆ ತಲುಪಲು ಸಾಧ್ಯವಾಗಿದೆ. ವೃತ್ತಿ ಬದುಕಿನ ಅನುಭವಗಳನ್ನು ಕೃತಿ , ಅಕ್ಷರ ರೂಪದಲ್ಲಿ ಸಮಾಜಕ್ಕೆ ಧಾರೆ ಎರೆಯುವ ಪ್ರಯತ್ನ ನಿರಂತರ ನಡೆಯುತ್ತಲೇ ಇರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಹೇಳಿದರು. ಅವರು ರವಿವಾರ ಸಮಾಜ ಮಂದಿರದಲ್ಲಿ ಸಾಹಿತ್ಯ ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಕೇವಲ ಸಾಹಿತಿಗಳಿಗೆ ಸಂಬಂಧಿಸಿದ್ದಲ್ಲ. ಅದನ್ನು ಕೃತಿಯಾಗಿ ರೂಪಿಸುವಲ್ಲಿ ಲೇಖಕರು ಮಾತ್ರವಲ್ಲ, ಪ್ರಕಾಶಕ ಬಳಗದ ಪರಿಶ್ರಮದ ಕುರಿತೂ ಗಮನ ಹರಿಸಬೇಕು ಎಂದವರು ಅಭಿಪ್ರಾಯಪಟ್ಟರು.

ಕೃತಿಗಳ ಲೋಕಾರ್ಪಣೆ: ವಿಶ್ರಾಂತ ಮುಖ್ಯ ಶಿಕ್ಷಕಿ ಪದ್ಮಾವತಿ ಪಂಡಿತ್ ಮೂಡುಬಿದಿರೆ ಅವರ ಚೊಚ್ಚಲ ಕಥಾ ಸಂಕಲನ " ಕಿಟಕಿಯಲ್ಲಿ ಕಂಡ ಕಥೆಗಳು" ಕೃತಿಯನ್ನು ಹಿರಿಯ ನ್ಯಾಯವಾದಿ ಕೆ. ರಮಾನಂದ ಪಂಡಿತ್ , ಶ್ರೀ ಕೃಷ್ಣ ಅಹಿತಾನಲ ಸಾಲಿಗ್ರಾಮ ಉಡುಪಿ ಅವರ " ಹರಿದಾಸ ಸಾಹಿತ್ಯ ಮತ್ತು ಇತರ ಧಾರ್ಮಿಕ ವಿಚಾರಗಳು " ಕೃತಿಯನ್ನು ಗುಂಡ್ಯಡ್ಕ ಶ್ರೀನಿವಾಸಪುರದ ಕರ್ಹಾಡ ಬ್ರಾಹ್ಮಣ ಸುಧಾರಕ ಸಂಘದ ಕಾರ್ಯಾಧ್ಯಕ್ಷ ರಾಮಚಂದ್ರ ಭಟ್ ನಾಟೇಕರ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ ಮಾತನಾಡಿ ಶಿಕ್ಷಕರ ಅನುಭವಗಳಿಂದ ಸಾಹಿತ್ಯ ಶ್ರೀಮಂತವಾಗಲು ಸಾಧ್ಯವಿದೆ. ಎಂದರು. ಇನ್ನೋರ್ವ ಅತಿಥಿ ನಿಟ್ಟೆಯ ಕನ್ನಡ ಉಪನ್ಯಾಸಕಿ ಶ್ರೀ ಮುದ್ರಾಡಿ ಸಾಹಿತ್ಯ ಕೃತಿಗಳನ್ನು ಖರೀದಿಸಿಕೊಂಡು ಓದಿ ಕೊಂಡಾಡುವ ಸಂಸ್ಕೃತಿ ಬೆಳೆಯಲಿ ಎಂದು ಹಾರೈಸಿದರು.
ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಹೆಚ್.ಸುರೇಶ್ ಪ್ರಭು ಅಧ್ಯಕ್ಷತೆವಹಿಸಿದ್ದರು.
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಚಂದನಾ ಕೆ.ಎಸ್. ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಉಪನ್ಯಾಸಕ ಎಂ. ಗಣೇಶ್ ಕಾಮತ್ ಕೃತಿ,ಕೃತಿಕಾರರ ಕುರಿತು ವಿವರಿಸಿದರು. ಕೃತಿಕಾರರು ಕೃತಿ ಪ್ರಕಟಣೆಗೆ ಕಾರಣರಾವರನ್ನು ಕೃತಜ್ಞತಾ ಪೂರ್ವಕ ಸ್ಮರಿಸಿಕೊಂಡರು.
ಇಬ್ಬರೂ ಲೇಖಕರನ್ನು ದಂಪತಿ ಸಹಿತ ಗೌರವಿಸಲಾಯಿತು. ಕೃತಿ ಪ್ರಕಟಣೆಯಲ್ಲಿ ಸಹಕಾರಿಗಳಾದವರನ್ನು ಗೌರವಿಸಲಾಯಿತು. ಲೇಖಕಿ ಪದ್ಮಾವತಿ ಪಂಡಿತ್ ಸ್ವಾಗತಿಸಿದರು.

ಚಿತ್ರಾಶ್ರೀ ಕೆ.ಎಸ್. ಮತ್ತು ಮಹೇಶ್ ಕುಮಾರ್ ಡಿ.ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು. ಧೃತಿ ಪಂಡಿತ್ ವಂದಿಸಿದರು.

Post a Comment

0 Comments