ಮೂಡುಬಿದಿರೆ: ಸಹಜ ಹೆರಿಗೆಯ ಬದಲಾಗಿ ಹೊಟ್ಟೆ ಸೀಳಿಕೊಂಡು ಬರುವ ಇಂದಿನ ಮಕ್ಕಳು ಶಿಕ್ಷೆ ಇಲ್ಲದ ಶಿಕ್ಷಣದಿಂದಾಗಿ ಹಾದಿ ತಪ್ಪಿದ್ದಾರೆ. ದೇವಿ ಮಹಾತ್ಮೆಯಂತಹ ಜೀವನ ಪಾಠದ ಪೌರಾಣಿಕ ಪ್ರಸಂಗದಲ್ಲೂ ನಾವಿಂದು ದೇವಿ, ದೇವತೆಗಳ ಬದಲಾಗಿ ಮಹಿಷಾಸುರನನ್ನು ವೈಭವೀಕರಿಸಿ ಮಕ್ಕಳಿಗೆ ತೋರಿಸುವ ವಾತಾವರಣವಿದೆ. ಇತಿಹಾಸವನ್ನು ಗೌರವಿಸುವ , ಸಂಸ್ಕೃತಿಯನ್ನು ಪ್ರೀತಿಸುವ , ನಡೆ ನುಡಿಯನ್ನು ರಾಮಕೃಷ್ಣರಂತೆ ಆದರ್ಶಮಯವಾಗಿಸುವಲ್ಲಿ ಧರ್ಮ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆ ಕಿರಿಯರಿಗೆ ಮಾದರಿಯಾಗಬೇಕು ಎಂದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾರ್ಥ ಸಾರಥಿ ಹೇಳಿದರು.
ಅವರು ಶನಿವಾರ ಸಂಜೆ ವಿಶ್ವ ಹಿಂದೂ ಪರಿಷತ್ ಬಜರಂಗದಳ , ಮಾತೃಶಕ್ತಿ , ದುರ್ಗಾವಾಹಿನಿ ಮೂಡುಬಿದಿರೆ ಪ್ರಖಂಡದ ವತಿಯಿಂದ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ಜರಗಿದ 23ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಶಸ್ತ್ರ ಮತ್ತು ಶಾಸ್ತ್ರವನ್ನು ಪೂಜಿಸುವ ನಮ್ಮ ನೆಲದಲ್ಲಿ ತಾಯಂದಿರು ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟರೆ ಸಾಕು. ಉಳಿದೆಲ್ಲವೂ ಅದನ್ನು ಹಿಂಬಾಲಿಸುತ್ತದೆ. ಬೇರುಗಳಿಗೆ ಹಾನಿಯಾದರೂ ಗಿಡ ಮರ ಬದುಕುತ್ತದೆ. ಆದರೆ ತಾಯಿ ಬೇರಿಗೆ ಹಾನಿಯಾದರೆ ಅದು ಸಾಯುತ್ತದೆ . ಹಾಗಾಗಿ ತಾಯಿ ಬೇರಿನ ಮಹತ್ವ ಅರಿತು ನಾವು ಎಳೆಯರಿಗೆ ಮಾದರಿಯಾಗಬೇಕಿದೆ ಎಂದವರು ನುಡಿದರು.
ಉದ್ಯಮಿ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದುರ್ಗಾವಾಹಿನಿ ಪ್ರಖಂಡ ಸಂಯೋಜಕಿ ರಂಜಿನಿ, ಅರ್ಚಕ ಶಿವಾನಂದ ಶಾಂತಿ ಉಪಸ್ಥಿತರಿದ್ದರು. ವಿಹಿಂಪ ಕಾರ್ಯಾಧ್ಯಕ್ಷ ಕೆ. ಶ್ಯಾಮ ಹೆಗ್ಡೆ ಸ್ವಾಗತಿಸಿದರು. ವಿಹಿಂಪ ಪ್ರಧಾನ ಕಾರ್ಯದರ್ಶಿ ಸುಚೇತನ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


0 Comments