ಮೂಡುಬಿದಿರೆಯಲ್ಲಿ ರಾಜಾಕಾಲುವೆಗೆ ಮಣ್ಣಿನ ರಾಶಿ*ಮಳೆಗಾಲದಲ್ಲಿ ಬೈಲಾರೆಯಲ್ಲಿ ಮನೆಗಳು ಮತ್ತೆ ಜಲಾವೃತಗೊಳ್ಳುವ ಭೀತಿಯಲ್ಲಿ ಜನರು

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಯಲ್ಲಿ ರಾಜಾಕಾಲುವೆಗೆ ಮಣ್ಣಿನ ರಾಶಿ
*ಮಳೆಗಾಲದಲ್ಲಿ ಬೈಲಾರೆಯಲ್ಲಿ ಮನೆಗಳು ಮತ್ತೆ  ಜಲಾವೃತಗೊಳ್ಳುವ ಮನೆಗಳು ಭೀತಿಯಲ್ಲಿ ಜನರು
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಬೈಲಾರೆ ಪ್ರದೇಶದಲ್ಲಿ ಭೂಮಿ ಖರೀದಿ ಮಾಡಿ ಸೈಟ್ ಗಳನ್ನು ಮಾಡಿ ಮಾರಾಟ ಮಾಡುವವರು ರಾಜ ಕಾಲುವೆಗೆ ಮಣ್ಣಿನ ರಾಶಿಯನ್ನು ಹಾಕುತ್ತಿದ್ದು ಇದರಿಂದಾಗಿ ಮುಂದಿನ ಮಳೆಗಾಲದ ಸಂದರ್ಭದಲ್ಲಿ ಈ ಪ್ರದೇಶದಲ್ಲಿರುವ ಮನೆಗಳೆಲ್ಲವೂ ಜಲಾವೃತಗೊಳ್ಳುವ ಭೀತಿಯಲ್ಲಿ ಜನರಿದ್ದಾರೆ. 
ಕಳೆದ ಕೆಲವು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಬೈಲಾರೆಯಲ್ಲಿ ಉಕ್ಕೇರುವ ಮಳೆ ನೀರಿನಿಂದಾಗಿ ಮನೆಗಳೋಳಗೆ ನೀರು ನುಗ್ಗುವ ಪ್ರಸಂಗ ನಡೆಯುತ್ತಲೇ ಬರುತ್ತಿದ್ದು ಇದಕ್ಕೆ ಮುಖ್ಯ ಕಾರಣವಾಗುತ್ತಿರುವುದು ರಾಜಾ ಕಾಲುವೆಯ ನಿಲ೯ಕ್ಷ್ಯ.
ಬೈಲಾರೆ ಪ್ರದೇಶದಲ್ಲಿ ಭೂ ಖರೀದಿಸಿ ಸೈಟುಗಳಾಗಿ ಭೂಮಿಯನ್ನು ರೂಪಿಸಿ ಮಾರಾಟ ಮಾಡಿವವರು ರಾಜ ಕಾಲುವೆಯನ್ನು ಸಾಕಷ್ಟು ಕಿರಿದುಗೊಳಿಸಿ ನೀರು ಸಾಗಲು ಅವಕಾಶ ಮಾಡಿಕೊಡದೆ ಇರುವುದೇ ಪ್ರಮುಖ ಕಾರಣ. ಕಾನೂನಿನಲ್ಲಿ ರಾಜ ಕಾಲುವೆಗಳ ರಕ್ಷಣೆಗೆ ಸಾಕಷ್ಟು ನಿಯಮಗಳಿದ್ದರೂ ಅವೆಲ್ಲವನ್ನು ಗಾಳಿಗೆ ತೂರಿ ಭೂಮಿಯನ್ನು ಸಮತಟ್ಟುಗೊಳಿಸಿ, ಕಾಲುವೆಯ ಅಂಚಿನವರೆಗೆ ಸೈಟುಗಳನ್ನು ನಿರ್ಮಿಸಿರುವುದೇ ಈ ಅಪಾಯಗಳು ಎದುರಾಗಲು ಕಾರಣವಾಗಿವೆ.
ಇದೀಗ ಕಾಲುವೆಯ ಪಕ್ಕದಲ್ಲಿರುವ ಜಾಗವನ್ನು ಸಮತಟ್ಟುಗೊಳಿಸಲಾಗಿದ್ದು ಅದರ ಮಣ್ಣುಗಳನ್ನು ಕಾಲುವೆಗಳ ಅಂಚಿಗೆ ಸುರಿಯಲಾಗಿದೆ ಇದರಿಂದಾಗಿ ಮಳೆಗಾಲದ ಸಂದರ್ಭದಲ್ಲಿ ಕಾಲುವೆ ತನ್ನಂತಾನಾಗೆ ಮುಚ್ಚುವಂತೆ ಮಾಡಲಾಗುತ್ತಿದ್ದು ಮನುಷ್ಯನ ವಿಕೃತಿಯ ಮನಸ್ಸಿಗೆ ಪ್ರಕೃತಿ ಮತ್ತೊಂದು ರೀತಿಯಲ್ಲಿ ಮುನಿಸಿಕೊಳ್ಳುತ್ತಿದೆ. ಹಾಗಾಗಿ ಈ ಭಾಗದಲ್ಲಿ ಮಳೆ ನೀರು ಸಾಗಲು ಸಾಕಷ್ಟು ಜಾಗವಿಲ್ಲದೆ ಹೆಚ್ಚುವರಿ ನೀರು, ಪಕ್ಕದಲ್ಲಿ ಮನೆ ನಿರ್ಮಿಸಿಕೊಂಡವರ ಮನೆಗಳ ಒಳಗೆ ನುಗ್ಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಮೂಡುಬಿದಿರೆಯ ಪ್ರಮುಖ ತಾಣ ಬಡಗುಬಸದಿಯಿಂದ ನಾಗರಕಟ್ಟೆ ಸಂಧಿಸುವ ರಾಜ ಕಾಲುವೆ, ಕಳೆದ ಕೆಲವು ವರ್ಷಗಳಿಂದ ಪುರಸಭೆಯ ಸದಸ್ಯರ ಆಸಕ್ತಿಯಂತೆ ಹೂಳು ತೆಗೆದು ಶುದ್ಧೀಕರಣ ಮಾಡಿ ಪರಿಸರದಲ್ಲಿ ಉತ್ತಮ ಕಾಲುವೆಯಾಗಿ ಗಮನ ಸೆಳೆದಿತ್ತು. ಇದೀಗ ಬೈಲಾರೆಯ ಈ ಪ್ರದೇಶದಲ್ಲಿ ದುಡ್ಡು ಮಾಡುವ ಹವಣಿಕೆಯೊಂದಿಗೆ ಬಂದಿರುವ ಯಾರೋ ವ್ಯಕ್ತಿಗಳು ಪಕ್ಕದ ಜಾಗವನ್ನು ಸಮತಟ್ಟುಗೊಳಿಸಿ ಹೆಚ್ಚುವರಿ ಮಣ್ಣನ್ನು ತೋಡಿಗೆ ಜಾರಿಸಿ ಬಿಟ್ಟಿದ್ದಾರೆ. ಮಾತ್ರವಲ್ಲದೆ ತೋಡಿನ ನಡುಭಾಗದಲ್ಲೇ ಸರ್ವೇ ಕಲ್ಲನ್ನು ಕೂಡ ನಾಟಿಸಲಾಗಿದೆ. ಈ ಸರ್ವೇ ಕಲ್ಲನ್ನು ನೋಡುವಾಗ ರಾಜ ಕಾಲುವೆಯನ್ನು ಕೂಡ ಅವರು ವಶಕ್ಕೆ ಪಡೆದ ಗುಮಾನಿ ಉಂಟಾಗುತ್ತಿದೆ.

ಈ ಪ್ರದೇಶದಲ್ಲಿ ಸುಮಾರು ನೂರರಷ್ಟು ಮನೆಗಳು ಈಗಾಗಲೇ ವಾಸ್ತವ್ಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ 25ಕ್ಕೂ ಅಧಿಕ ಮನೆಗಳಾಗುವ ಜಾಗವನ್ನು ನಿರ್ಮಿಸಲಾಗಿದೆ. ಆದ್ದರಿಂದ ಈ ಭಾಗದಲ್ಲಿ ಬೀಳುವ ಮಳೆ ನೀರು ರಾಜ ಕಾಲುವೆಯಲ್ಲೇ ಸಾಗಬೇಕಾಗಿದೆ. ಒಂದು ವೇಳೆ ರಾಜ ಕಾಲುವೆ ಕಿರಿದಾದರೆ ಮುಂದಿನ ದಿನಗಳಲ್ಲಿ ಅಪಾಯ ಇನ್ನಷ್ಟು ಹೆಚ್ಚಲಿದೆ. ಈ ಪ್ರದೇಶದವರೇ ಆಗಿರುವ ಡಾಕ್ಟರ್ ಎಂ ವೀರಪ್ಪ ಮೊಯ್ಲಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೈಲಾರೆ ಪ್ರದೇಶದ ಕಿರಿದಾದ ತೋಡನ್ನು ಅಗಲಗೊಳಿಸಿ ರಾಜ ಕಾಲುವೆ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಕಾಲುವೆಯ ಆಸು ಪಾಸಿನ ಜನರು ತಮ್ಮ ಜಾಗಗಳನ್ನು ಸ್ವಯಂ ಪ್ರೇರಿತವಾಗಿ ರಾಜಕಾಲುವೆ ನಿರ್ಮಿಸಲು ಬಿಟ್ಟುಕೊಟ್ಟಿದ್ದರು. ಆ ದಿನಗಳಲ್ಲಿ ಬಡಗು ಬಸದಿಯ ಪೂರ್ವ ಪಶ್ಚಿಮ ದಿಕ್ಕಿನ ಜಾಗಗಳಲ್ಲಿ ಮಳೆ ನೀರು ತುಂಬಿ ರಸ್ತೆ ಗಳಲ್ಲಿ ವಾಹನ ಸಂಚಾರಕ್ಕೆ ಮತ್ತು ಜನ ಸಂಚಾರಕ್ಕೆ ಅಡ್ಡಿ ಉಂಟಾಗಿರುವ ಘಟನೆಗಳು ನಡೆದಿತ್ತು ಎನ್ನುತ್ತಾರೆ ಗ್ರಾಮಸ್ಥರು.
 
ಶಾಲೆಗಳಿಗೆ ಮಳೆಯ ನೀರಿನ ಆತಂಕದಿಂದಾಗಿ ರಜೆ ನೀಡಿರುವ ಘಟನೆಯು ನಡೆದಿತ್ತು ಎನ್ನಲಾಗಿದೆ. ಆದರೆ ಇಂದು ದುಡ್ಡಿನ ದಂಧೆಯ ವಸತಿ ನಿರ್ಮಾಣದ ಜಾಗ ಅಭಿವೃದ್ಧಿಕಾರರು ಅದೇ ರಾಜ ಕಾಲುವೆಯನ್ನು ಮತ್ತೆ ಕಿರಿದುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಗುಮಾನಿ ಇದೆ. 

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಮಳೆಗಾಲ ಸಂದರ್ಭದಲ್ಲಿ ಮತ್ತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗುವ ಎಲ್ಲಾ ಪ್ರಸಂಗಗಳು ನಡೆಯಲಿವೆ. 

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Post a Comment

0 Comments