ಮೂಡುಬಿದಿರೆ: ಅಗ್ನಿವೀರ್ ನೇಮಕಾತಿ ರ್ಯಾಲಿ ಮುಕ್ತಾಯ : 8,500 ಮಂದಿ ಭಾಗಿ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ: ಅಗ್ನಿವೀರ್ ನೇಮಕಾತಿ ರ್ಯಾಲಿ ಮುಕ್ತಾಯ : 8,500 ಮಂದಿ ಭಾಗಿ

ಮೂಡುಬಿದಿರೆ: ಅಗ್ನಿವೀರ್ ರ‍್ಯಾಲಿ ಆಡಳಿತ, ಸಂಘಟಿತ ವ್ಯವಸ್ಥೆ ಮತ್ತು ಸೇವಾಭಾವದ ಅಪರೂಪದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ನೇಮಕಾತಿ ಪ್ರಕ್ರಿಯೆಯಲ್ಲ; ಯುವ ಮನಸ್ಸುಗಳಲ್ಲಿ ದೇಶಸೇವೆಯ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮಹತ್ವದ ಅಧ್ಯಾಯವಾಗಿದೆ. ಪುಣ್ಯದ ಕೆಲಸದಲ್ಲಿ ನಮ್ಮ ಸಂಸ್ಥೆಯು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.
ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜನವರಿ 30ರಂದು ಆರಂಭಗೊಂಡು ಫೆ. 11ರವರೆಗೆ ನಡೆದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು. 
ಅಭ್ಯರ್ಥಿಗಳ ದೈಹಿಕ ಪರೀಕ್ಷೆಗಳು ಫೆಬ್ರವರಿ 8ರಂದು ಪೂರ್ಣಗೊಂಡಿದ್ದು, ವೈದ್ಯಕೀಯ ಪರೀಕ್ಷೆಗಳು ಫೆಬ್ರವರಿ 11ರಂದು ಮುಕ್ತಾಯಗೊಂಡಿತು. 

ಪ್ರಕ್ರಿಯೆಯಲ್ಲಿ ರಾಜ್ಯದ 11 ಜಿಲ್ಲೆಗಳಿಂದ 8,500ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.
ಭಾರತೀಯ ಸೇನೆಯ ಅಗ್ನಿಪಥ ಯೋಜನೆಯಡಿ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆದ ಈ ರ‍್ಯಾಲಿ ರಾಜ್ಯಮಟ್ಟದಲ್ಲಿ ಮಾದರಿ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ.   

ವಿಜಯಪುರ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದು ರ‍್ಯಾಲಿಗೆ ಹಾಜರಾಗಿದ್ದರು. ಆಯ್ಕೆ ಪ್ರಕ್ರಿಯೆ ಲಿಖಿತ, ದೈಹಿಕ ಮತ್ತು ವೈದ್ಯಕೀಯ ಎಂಬ ಮೂರು ಹಂತಗಳಲ್ಲಿ ನಡೆದಿದ್ದು, ಪ್ರತಿ ಹಂತದಲ್ಲೂ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಯಿತು.

ದೇಶಸೇವೆಯ ಕನಸು ಹೊತ್ತು ಸಾವಿರಾರು ಯುವಕರ ಹೆಜ್ಜೆಗುರುತುಗಳಿಗೆ ಸಾಕ್ಷಿಯಾದ ಶಿಸ್ತು, ಸಂಘಟನೆ ಹಾಗೂ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮಾದರಿ ಪ್ರದರ್ಶನವಾಗಿ ಮೂಡಿಬಂದಿದೆ. 

ಆಳ್ವಾಸ್ ನಿಂದ ಉತ್ತಮ ವ್ಯವಸ್ಥೆ–ಸೇವೆ
ರ‍್ಯಾಲಿಯ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ. ದಿನಂಪ್ರತಿ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಮೂಡುಬಿದಿರೆಗೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ, ಆಳ್ವಾಸ್ ಸಂಸ್ಥೆ ಸುಸಜ್ಜಿತ ವಸತಿ, ಸ್ವಚ್ಛ ಶೌಚಾಲಯ, ಗುಣಮಟ್ಟದ ಊಟೋಪಚಾರ ಹಾಗೂ ವೈದ್ಯಕೀಯ ನೆರವು ಒದಗಿಸುವ ಮೂಲಕ ಮಾನವೀಯ ಮುಖವನ್ನು ಪ್ರದರ್ಶಿಸಿತು.
ರ‍್ಯಾಲಿ ನಿರ್ವಹಣೆಯಲ್ಲಿ ತೊಡಗಿದ್ದ ಸುಮಾರು 180 ಮಂದಿ ಸೇನಾ ಹಾಗೂ ಆಡಳಿತಾಧಿಕಾರಿಗಳಿಗೆ ಸಂಪೂರ್ಣ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ, ಅಭ್ಯರ್ಥಿಗಳನ್ನು ವಿದ್ಯಾಗಿರಿಯಿಂದ ಸ್ವರಾಜ್ಯ ಮೈದಾನಕ್ಕೆ ದಿನಂಪ್ರತಿ ಸುಮಾರು 10 ಬಸ್ಸುಗಳಲ್ಲಿ ಸಾಗಿಸುವ ಹೊಣೆಗಾರಿಕೆಯನ್ನು ಆಳ್ವಾಸ್ ಸಂಸ್ಥೆ ವಹಿಸಿಕೊಂಡಿತ್ತು. ಈ ಕಾರ್ಯಾಚರಣೆ ಮಧ್ಯರಾತ್ರಿ 1 ಗಂಟೆಯಿಂದಲೇ ಆರಂಭಗೊಳ್ಳುತ್ತಿದ್ದುದು, ಸಂಸ್ಥೆಯ ಶಿಸ್ತು ಮತ್ತು ಬದ್ಧತೆಯ ಸಾಕ್ಷಿಯಾಗಿದೆ.
ಆಳ್ವಾಸ್ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರೆ, ಎನ್‌ಸಿಸಿ ವಿದ್ಯಾರ್ಥಿಗಳು ಶಿಸ್ತು, ಸಂಯೋಜನೆ ಹಾಗೂ ಸಂಚಾರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಅಹೋರಾತ್ರಿ ಶ್ರಮ ಸಾರ್ವಜನಿಕರು ಹಾಗೂ ಸೇನಾ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಯಿತು.

Post a Comment

0 Comments