ಹಿಂದೂ ಸಂಗಮದ ಮೂಲಕ ರಾಷ್ಟ್ರೀಯತೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಉದ್ದೇಶ : ತಾರನಾಥ ಕೊಟ್ಟಾರಿ

ಜಾಹೀರಾತು/Advertisment
ಜಾಹೀರಾತು/Advertisment
ಹಿಂದೂ ಸಂಗಮದ ಮೂಲಕ ರಾಷ್ಟ್ರೀಯತೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಉದ್ದೇಶ : ತಾರನಾಥ ಕೊಟ್ಟಾರಿ


ಮೂಡುಬಿದಿರೆ: ಆರ್‌ಎಸ್‌ಎಸ್‌ಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಘದ ಆಶಯವಾದ ರಾಷ್ಟ್ರೀಯತೆಯನ್ನು ಹಳ್ಳಿ–ಗ್ರಾಮೀಣ ಪ್ರದೇಶಗಳವರೆಗೆ ತಲುಪಿಸುವ ಉದ್ದೇಶದಿಂದ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಘದ ಚಿಂತನೆ, ಕಾರ್ಯಪಥ ಹಾಗೂ ಧ್ಯೇಯಗಳನ್ನು ಜನತೆಗೆ ಪರಿಚಯಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಕಾರ ಭಾರತಿ ಮಂಗಳೂರು ಜಿಲ್ಲೆಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಹೇಳಿದರು.

ಅವರು ಭಾನುವಾರ‌ ಸ್ವರಾಜ್ಯ ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಬೌದ್ಧಿಕ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಅಡುಗೆ ಮನೆಗಳು ಖಾಲಿಯಾಗುತ್ತಿದ್ದು, ಆನ್‌ಲೈನ್ ಆಹಾರ ಪದ್ಧತಿ ಹೆಚ್ಚುತ್ತಿದೆ. ಆದರೆ ಕೌಟುಂಬಿಕ ವ್ಯವಸ್ಥೆಯೇ ಹಿಂದುತ್ವದ ಮೂಲವಾಗಿದೆ. ಕುಟುಂಬಗಳು ಒಟ್ಟಾಗಿ ಊಟ ಮಾಡಬೇಕು, ಭಜನೆ–ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು. ಉಡುಗೆ–ತೊಡುಗೆ ಹಾಗೂ ಆಚರಣೆಗಳಲ್ಲಿ ಸ್ವದೇಶಿತನವನ್ನು ಅಳವಡಿಸಿಕೊಳ್ಳಬೇಕೆಂದರು.

ನಮ್ಮನ್ನು ಜಾತಿ ಹಾಗೂ ಪಕ್ಷಗಳ ಮೂಲಕ ವಿಭಜಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಎಲ್ಲ ಸವಾಲುಗಳಿಗೆ ಉತ್ತರ ಒಂದೇ — ಹಿಂದೂ ಸಮಾಜ ಜಾತಿ–ಮತ ಭೇದ ಮರೆತು ಜಾಗೃತವಾಗಬೇಕು ಎಂದು ಕರೆ ನೀಡಿದರು.

ಸಾಮರಸ್ಯದ ಭಾವನೆ ಅತ್ಯಂತ ಅಗತ್ಯವಾಗಿದ್ದು, ಇಂದು ಅದು ಕುಂಠಿತವಾಗುತ್ತಿದೆ. ನಮ್ಮೊಳಗೆ ಕಂದಕ ನಿರ್ಮಿಸುವ ಷಡ್ಯಂತ್ರಗಳು ನಡೆಯುತ್ತಿವೆ. ನಾಗರಿಕ ಶಿಷ್ಟಾಚಾರವನ್ನು ಪಾಲಿಸಿ, ನಮ್ಮ ತಪ್ಪುಗಳನ್ನು ವಿಮರ್ಶಿಸಿ ಸ್ವಯಂ ಸರಿಪಡಿಸಿಕೊಳ್ಳುವ ಮನೋಭಾವ ಬೆಳೆಸಬೇಕೆಂದು ಅವರು ಹೇಳಿದರು.

ವಕೀಲ ಶರತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ಸನಾತನ ಹಿಂದೂ ಧರ್ಮದ ವೇದಗಳು, ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲಿನ ಯಥೋ ಧರ್ಮಃ ತಥೋ ಜಯಃ, ಸತ್ಯಮೇವ ಜಯತೇ ಎಂಬ ಧ್ಯೇಯ ವಾಕ್ಯಗಳನ್ನು ನಮ್ಮ ಸಂವಿಧಾನ, ಸಂಸತ್ತು ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಅಳವಡಿಸಿಕೊಂಡಿರುವುದು ಸನಾತನ ಧರ್ಮದ ಹಿರಿಮೆಯ ಪ್ರತೀಕವಾಗಿದೆ” ಎಂದರು.

ಮುಖ್ಯ ಅತಿಥಿಗಳಾಗಿ ಮನೋಜ್ ಶೆಣೈ, ಪಟ್ಟಣಶೆಟ್ಟಿ ಸುದೇಶ್ ಜೈನ್, ಕೋಟಬಾಗಿಲು ದೇವಸ್ಥಾನದ ಮೊಕ್ತೇಸರ ವಿಶ್ವನಾಥ ಹೆಗ್ಡೆ, ಮಣಿಕಂಠ ಕ್ಷೇತ್ರದ ಪ್ರಧಾನ ಅರ್ಚಕ ಶಿವಾನಂದ ಶಾಂತಿ, ಗೌರಿಕೆರೆ ರಾಮಮಂದಿರದ ವಿಶ್ವನಾಥ ದೇವಾಡಿಗ, ವಿಶ್ವಕರ್ಮ ಸಮಾಜದ ಶಿವರಾಮ ಆಚಾರ್, ಮಾರಿಗುಡಿ ಅರ್ಚಕ ಸುಂದರ ಬೋವಿ ಉಪಸ್ಥಿತರಿದ್ದರು.

ಸ್ವಾತಿ ಬೋರ್ಕರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು. ಶಾಂತಾರಾಮ ಕುಡ್ವ ಸ್ವಾಗತಿಸಿದರು. ಜಗದೀಶ ಆಚಾರ್ಯ ವಂದನಾರ್ಪಣೆ ಹಾಗೂ ಶಾಂತಿ ಮಂತ್ರ ಪಠಣ ನೆರವೇರಿಸಿದರು. ಶಾಂತಾರಾಮ ಕುಡ್ವ ಹಾಗೂ ಸೀತಾರಾಮ ಆಚಾರ್ಯ ನಿರೂಪಿಸಿದರು.

Post a Comment

0 Comments