ಮೂಡುಬಿದಿರೆ: ಇಲ್ಲಿನ ಸುರಸಾರವ ಪ್ರೈವೇಟ್ ಲಿಮಿಟೆಡ್ (ಸಂಗೀತ ಶಾಲೆ) ಸಂಸ್ಥೆಯ ವತಿಯಿಂದ ದ್ವಿತೀಯ ವರ್ಷದ 'ಸಂಗೀತೋತ್ಸವ-2026: ದಣಿದ ದನಿಗೆ ರಾಗದ ಬೆಸುಗೆ' ಕಾರ್ಯಕ್ರಮವು ಜನವರಿ 25ರ ಭಾನುವಾರ ಸಂಜೆ 5 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಯಶವಂತ ಎಂ.ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಧೈಯೋದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೆ, ಕಿಶೋರ್ ಕುಮಾರ್ ಅವರ ಗೀತೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿದ ಪ್ರತಿಭೆಗಳಿಗೆ ಹಾಗೂ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ 'ಗೌರವ ವಂದನೆ' ಸಲ್ಲಿಸಲಾಗುವುದು.
ಸಂಸ್ಥೆಯ ಅತ್ಯುನ್ನತ ಪುರಸ್ಕಾರವಾದ 'ಸುರಸಾರವ ಕಲಾವಿಭೂಷಣ' ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀಪತಿ ಭಟ್ ಅವರಿಗೆ ನೀಡಿ ಗೌರವಿಸಲಾಗುವುದು. ಪೂರ್ಣಿಮಾ (ಉಡುಪಿ), ವೇ.ಮೂ. ಶಶಿಧರ್ ಪುರೋಹಿತ್ (ಕಟಪಾಡಿ), ಆಲ್ವಿನ್ ಅಂದ್ರಾದೆ (ಸಾಸ್ತಾನ) ಮತ್ತು ಸುಶಾಂತ್ ಭಂಡಾರಿ (ಮಂಗಳೂರು) ಅವರಿಗೆ 'ಸುರಸಾರವ ಕಲಾಭೂಷಣ' ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಭಾಜಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಮಧ್ಯಾಹ್ನ 1:45 ರಿಂದ ಶಾರದಾ ಪೂಜೆ, ಗುರುವಂದನೆ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ನವೀನ್ ಕೋಟ್ಯಾನ್ , ರಾಜೇಶ್ ಶೆಟ್ಟಿ, ಮಲ್ಲಿಕಾ ಸುಕೇಶ್, ವಿಠಲ್ ಅಮೀನ್ ಸುದ್ದಿಗೋಷ್ಠಿಯಲ್ಲಿದ್ದರು.


0 Comments