ಸ್ಟೆರ್‌ಲೈಟ್ ಕಂಪನಿ ದೌರ್ಜನ್ಯ: ಬಡಗ ಮಿಜಾರು ರೈತರಿಂದ ಪ್ರಕರಣ ಉಚ್ಛ ನ್ಯಾಯಾಲಯಕ್ಕೆ
ಮೂಡುಬಿದಿರೆ: ಉಡುಪಿ -ಕೇರಳ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ಸಂಬಂಧಪಟ್ಟಂತೆ, ಸ್ಟೆರ್‌ಲೈಟ್ ಕಂಪನಿಯವರು ರೈತರ ಮೇಲೆ ನಡೆಸಿದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ಬಡಗ ಮಿಜಾರು ಗ್ರಾಮದ ರೈತ ಪ್ರಮುಖರು ವಾಣಿವಿಲಾಸ ಶಾಲೆಯಲ್ಲಿ ಸಭೆ ನಡೆಸಿದರು.
ಕಂಪನಿಯ ಕಾನೂನುಬಾಹಿರ ಕೃತ್ಯಗಳಿಗೆ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಪ್ರಕರಣ ದಾಖಲಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ರೈತರೊಂದಿಗೆ ಸಂವಾದ ನಡೆಸಿ, ಹೋರಾಟದ ರೂಪುರೇಷೆಗಳ ಕುರಿತು ವಿವರಿಸಿದರು.
ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಮತ್ತು ಮಂಜುನಾಥ್ ಭಟ್ ಅವರ ನೇತೃತ್ವದಲ್ಲ ಸಭೆ ಜರಗಿತು.
ಲಾಯ್ಡ್ ಡಿ ಸೋಜ ಸಹಿತ ಪ್ರಮುಖರು ಸಭೆಯಲ್ಲಿದ್ದರು. ಗ್ರಾಮದ ಪ್ರಗತಿಪರ ಕೃಷಿಕರು, ಹಾಲು ಸಹಕಾರಿ ಸಂಘದ ಪ್ರಮುಖರು ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.
ಪ್ರಗತಿಪರ ಕೃಷಿಕರು ಮತ್ತು ಹಾಲು ಸಹಕಾರಿ ಸಂಘದ ಪ್ರಮುಖರಾದ ಭಾಸ್ಕರ್ ಶೆಟ್ಟಿ ಅವರ ಅಡಿಕೆ ತೋಟ, ಹಾಗೂ ಸಂಜೀವ ಗೌಡರ ಅಡಿಕೆ ಮತ್ತು ತೆಂಗಿನ ತೋಟಗಳ ಮೇಲೆ ಯುಕೆಟಿಸಿಎಲ್ 400 ಕೆವಿ ಕಂಪನಿಯು ಪೊಲೀಸರನ್ನು ಬಳಸಿಕೊಂಡು ನಡೆಸಿದ ದೌರ್ಜನ್ಯದ ಘಟನೆಯನ್ನು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ರೈತರ ಮೇಲೆ ಬಲಪ್ರಯೋಗ ಮಾಡಿ ಕೃಷಿ ಭೂಮಿಗೆ ಹಾನಿ ಮಾಡಿರುವುದನ್ನು ಸಭೆಯು ಖಂಡಿಸಿತು.
ಈ ಮೂಲಕ ರೈತರ ಭೂಮಿ ಮತ್ತು ಹಕ್ಕುಗಳ ರಕ್ಷಣೆಗೆ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಲಾಗಿದೆ.
ರೈತರ ಮೇಲಿನ ದೌರ್ಜನ್ಯ ನಿಲ್ಲುವಂತೆ ಆಗ್ರಹಿಸಿ, ಬೃಹತ್ ಪ್ರತಿಭಟನೆಯ ರೂಪದಲ್ಲಿ ಶನಿವಾರದಂದು ಪಾದಯಾತ್ರೆ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ಪಾದಯಾತ್ರೆಯು ಅಶ್ವತ್ಥಪುರ ಶ್ರೀರಾಮ ದೇವಸ್ಥಾನದಿಂದ ಪ್ರಾರಂಭವಾಗಲಿದ್ದು, "ರೈತರ ಮೇಲಿನ ದೌರ್ಜನ್ಯ ನಿಲ್ಲಲಿ, ಭೂಮಿ ಉಳಿಸಿ, ಬದುಕಲು ಬಿಡಿ" ಎಂಬ ಘೋಷವಾಕ್ಯದೊಂದಿಗೆ ರೈತರು ಹೆಜ್ಜೆ ಹಾಕಲಿದ್ದಾರೆ.



0 Comments