ಒಂದು ವಾರದೊಳಗೆ ಬಸ್ ಸ್ಟ್ಯಾಂಡ್ ಪಾಕಿ೯ಂಗ್ ಸಮಸ್ಯೆಗೆ ಕಡಿವಾಣ : ನಾಗರಾಜ ಪೂಜಾರಿ

ಜಾಹೀರಾತು/Advertisment
ಜಾಹೀರಾತು/Advertisment

 ಒಂದು ವಾರದೊಳಗೆ ಬಸ್ ಸ್ಟ್ಯಾಂಡ್ ಪಾಕಿ೯ಂಗ್ ಸಮಸ್ಯೆಗೆ ಕಡಿವಾಣ : ನಾಗರಾಜ ಪೂಜಾರಿ

ಮೂಡುಬಿದಿರೆ : ಒಂದು ವಾರದೊಳಗೆ ಖಾಸಗಿ ಬಸ್ ಸ್ಟ್ಯಾಂಡಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದೆದುರಿನ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕಲಾಗುವುದು ಎಂದು ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಹೇಳಿದರು. 

ಅವರು ಗುರುವಾರ ಸಂಜೆ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಪುರಸಭೆ, ಪೊಲೀಸ್ ನಿರೀಕ್ಷಕ, ಬಸ್ಸು ಮಾಲಕರ ಸಂಘ ಮತ್ತು ಸಂಕೀರ್ಣದ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದರು. 



   ಈ ಸಂಕೀರ್ಣದ ಎದುರು ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದಾಗಿ ಸಮಸ್ಯೆಯಾಗಿ ವ್ಯಾಪಾರಸ್ಥರಿಗೂ ಸಮಸ್ಯೆಯಾಗುತ್ತಿರುವ ಹಲವು ದೂರುಗಳು ಬಂದಿವೆ ಇದಕ್ಕಾಗಿ ಈಗಾಗಲೇ ಮೀಟಿಂಗ್ ಗಳನ್ನು ಮಾಡಲಾಗಿದೆ ಆದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. 


ಇದೀಗ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ವ್ಯಾಪಾರಸ್ಥರು ಮತ್ತು ಗ್ರಾಹಕರ ದ್ವಿಚಕ್ರ ವಾಹನಗಳನ್ನು ಒಂದು ಸಾಲಿನಲ್ಲಿ ಮಾತ್ರ ನಿಲ್ಲಿಸಲು ಅವಕಾಶ, ಉಳಿದವರ ದ್ವಿಚಕ್ರ ವಾಹನಗಳನ್ನು ಶೌಚಾಲಯದ ಬಳಿ ಮತ್ತು ಇತ್ತೀಚೆಗೆ ವ್ಯವಸ್ಥೆ ಮಾಡಿರುವ ಜಾಗದಲ್ಲಿ ನಿಲ್ಲಿಸಬೇಕು. ಬೆಳಿಗ್ಗೆಯಿಂದ ಸಂಜೆವರೆಗೆ ವಾಹನಗಳನ್ನು ನಿಲ್ಲಿಸಿ ಹೋಗುವವರಿಗೆ ಅವಕಾಶವಿಲ್ಲ. ಪ್ರಯಾಣಿಕರು ಓಡಾಡುವ ಸ್ಥಳವನ್ನು ಅಂಗಡಿಯವರು ಅತಿಕ್ರಮಣ ಮಾಡಿಕೊಂಡಿದ್ದು ಇದನ್ನು ತಕ್ಷಣ ತೆರವುಗೊಳಿಸಬೇಕು ಇಲ್ಲದಿದ್ದರೆ ಪುರಸಭೆ ತೆರವುಗೊಳಿಸುತ್ತದೆ ಎಂದು ಎಚ್ಚರಿಸಿದರು. 


ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಅವರು ಮಾತನಾಡಿ ತಮ್ಮ ಅಂಗಡಿಯೆದುರು, ಕಟ್ಟಡದೆದುರು ವಾಹನ ನಿಲ್ಲಿಸಬೇಡಿ ಎಂದು ಯಾರೂ ಹೇಳುವಂತಿಲ್ಲ. ಪುರಸಭೆಯು ಆ ಜಾಗಕ್ಕೆ ಡಾಮಾರು ಹಾಕಿ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಯಾರಿಗೂ ಅಧಿಕಾರವಿಲ್ಲ ಎಂದ ಅವರು ಪುರಸಭೆಯವರು ತಮ್ಮ ಕೆಲಸವನ್ನು ಬೇಗನೇ ಮಾಡಿಕೊಡಿ,ಉಳಿದ ಕೆಲಸವನ್ನು ನಾವು ಮಾಡುತ್ತೇವೆಂದು ಹೇಳಿದರು.


ಮುಖ್ಯಾಧಿಕಾರಿ ಇಂದು ಎಂ.ಅವರು ಸಮಸ್ಯೆಗಳು ಮತ್ತು ವ್ಯಾಪಾರಸ್ಥರ ಅಭಿಪ್ರಾಯ ಪಡಕೊಂಡು ಮಾತನಾಡಿ ಬಸ್ಸುಗಳ ನಿಲುಗಡೆಗೆ ಮಾರ್ಕಿಂಗ್ ಮಾಡಿ ಬ್ಯಾರಿಕೇಡ್ ಹಾಕಲಾಗುವುದು. ಬಸ್ ಮಾಲಕ ಸಂಘದವರು, ಬಾಡಿಗೆದಾರರು, ಸಾರ್ವಜನಿಕರು ಸಹಕರಿಸುವಂತೆ ಕೋರಿದರು. 


  ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ತಡೆಯಲು ಈ ಹಿಂದೆ ಇದ್ದ ನಿಯಮಗಳನ್ನು ಪರಿಷ್ಕರಿಸಿ, ಮೂರು ತಿಂಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.


ಬಸ್ಸು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪಿ.ಎಂ, ಬಸ್ಸು ಮಾಲಕ ಶಶಿ ಅಮೀನ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ವಾಣಿಜ್ಯ ಸಂಕೀರ್ಣದ ಶೇಖರ್ ಬೊಳ್ಳಿ, ಪ್ರದೀಪ್ ರಾವ್, ಸಂತೋಷ್ ಶೆಟ್ಟಿ, ನಾಗೇಶ್ ಬಂಗೇರ, ನವೀನ್ ಹೆಗ್ಡೆ,ಪತ್ರಕರ್ತರಾದ ಯಶೋಧರ ಬಂಗೇರ, ಪ್ರಸನ್ನ ಹೆಗ್ಡೆ ಮತ್ತಿತರರು ಸಲಹೆಗಳನ್ನು ನೀಡಿದರು.

ಕಂದಾಯ ನಿರೀಕ್ಷಕಿ ಜ್ಯೋತಿ ಎಚ್., ಪುರಸಭೆ ಇಂಜಿಯರ್ ನಳಿನ್ ಕುಮಾರ್ ಪಿ. ಉಪಸ್ಥಿತರಿದ್ದರು.

Post a Comment

0 Comments