ಕಲ್ಲಮುಂಡ್ಕೂರು ಗ್ರಾಮಸಭೆ *ಉದ್ಯೋಗದ ಆಮಿಷ, ಲಕ್ಕೀ ಸ್ಕೀಮ್ ಗಳಿಗೆ ಬಲಿಯಾಗದಿರಲು ಗ್ರಾಮಸ್ಥರಿಗೆ ಪೊಲೀಸರಿಂದ ಸಲಹೆ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಮುಂಡ್ಕೂರು ಗ್ರಾಮಸಭೆ


*ಉದ್ಯೋಗದ ಆಮಿಷ, ಲಕ್ಕೀ ಸ್ಕೀಮ್ ಗಳಿಗೆ ಬಲಿಯಾಗದಿರಲು ಗ್ರಾಮಸ್ಥರಿಗೆ ಪೊಲೀಸರಿಂದ ಸಲಹೆ

ಮೂಡುಬಿದಿರೆ : ತಾಲೂಕು ವ್ಯಾಪ್ತಿಯಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಉದ್ಯೋಗ ನೀಡುವ ಭರವಸೆಯ ಕರೆಗೆ ಸ್ಪಂದಿಸಿರುವ ಒಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ, ಉಪನ್ಯಾಸಕರೋವ೯ರು ವಂಚನೆಗೊಳಗಾಗಿದ್ದಾರೆ ಅಲ್ಲದೆ ಅಲ್ಲಲ್ಲಿ ನಡೆಯುವ ಲಕ್ಕಿ ಸ್ಕೀಂಗಳ ಬಗ್ಗೆಯೂ ಜನರು ಜಾಗೃತರಾಗಬೇಕೆಂದು ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಎಎಸ್ ಐ ರಾಜೇಶ್ ಅವರು ಸಲಹೆ ನೀಡಿದ್ದಾರೆ.   

ಅವರು ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಕಲ್ಲಮುಂಡ್ಕೂರು ಸಮೀಪದ ಸಂಪಿಗೆಯಲ್ಲಿ ಓವ೯ರು ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಲಕ್ಷ ಹಣವನ್ನು ಕಳೆದುಕೊಂಡಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.


ನಿಡ್ಡೋಡಿ ಹಾಗೂ ಕಲ್ಲಮುಂಡ್ಕೂರು ಗ್ರಾಮಗಳಲ್ಲಿ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿದೆ. ಗಣಿ ಇಲಾಖೆಯಲ್ಲಿ ಪ್ರಶ್ನಿಸಿದರೆ, ತಹಸೀಲ್ದಾರ್ ಎನ್.ಒ.ಸಿ ನೀಡಿದ್ದಾರೆ ಎಂದು ಹೇಳುತ್ತಾರೆ. ಅಕ್ರಮವಾಗಿ ನಡೆಯುವ ಗಣಿಗಾರಿಕೆಗೆ ತಹಶೀಲ್ದಾರ್ ಹೇಗೆ ಪರವಾನಿಗೆ ನೀಡಿದ್ದಾರೆಂದು ಕೇಳಲು ಈ ಸಭೆಗೆ ಅವರು ಬಂದಿಲ್ಲ. ಗಣಿಗಾರಿಕೆಯಿಂದಾಗುತ್ತಿರುವ ಸಮಸ್ಯೆಗಳನ್ನು ತಿಳಿಸಲು ತಹಸೀಲ್ದಾರರು ಗ್ರಾಮಸಭೆಗೆ ಬರಬೇಕು ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುಂದರ್, ಗ್ರಾಮಸ್ಥ ಸುಧಾಕರ್ ಸಹಿತ ಗ್ರಾಮಸ್ಥರು ಪಟ್ಟು ಹಿಡಿದ ಘಟನೆಯೂ ನಡೆಯಿತು.

 

  ಈ ಬಗ್ಗೆ ಮೊದಲೇ ಪಂಚಾಯತ್ ಗೆ ಗ್ರಾಮಸ್ಥರು ಮನವಿ ಮಾಡಿದ್ದೇವೆ. ಇಲ್ಲವಾದಲ್ಲಿ ಗ್ರಾಮಸಭೆ ಮುಂದುವರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಳಿಕ ಕಂದಾಯ ನಿರೀಕ್ಷಕ ಮಂಜುನಾಥ ಸಭೆಗೆ ಬಂದು, ಗಣಿ ಇಲಾಖೆಯವರು ಖಾಸಗಿ ಜಾಗವೇ, ಇಲ್ಲ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆಯೇ ಎನ್ನುವ ಮಾಹಿತಿ ಕೇಳಿದ್ದಾರೆ. ಗಣಿಗಾರಿಕೆಯವರ ಸೂಚನೆಯಂತೆ ಎನ್‌ಒಸಿ ನೀಡಲಾಗಿದೆ. ಗಣಿಗಾರಿಕೆ ನಡೆಸುತ್ತಿರುವ ಜಾಗದಲ್ಲಿ ಹೈಟೆಂಕ್ಷನ್ ವಿದ್ಯುತ್ ವೈರುಗಳು ಹಾದುಹೋಗಿದ್ದು, ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಂಡರೆ ಗಣಿಗಾರಿಕೆ ಸ್ಥಗಿತವಾಗಬಹುದು. ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ತಹಸೀಲ್ದಾರ್‌ಗೆ ಮನವರಿಕೆ ಮಾಡಲಾಗುವುದು ಎಂದರು. 


ಸ್ಮಶಾನಕ್ಕೆ ಜಾಗ ಕಾಯ್ದಿರಿಸುವ ಕುರಿತು ಸದಸ್ಯ, ಮಾಜಿ ಅಧ್ಯಕ್ಷ ಕೇಶವ ಸಭೆಯಲ್ಲಿ ಪ್ರಸ್ತಾಪಿಸಿದರು. ಸ್ಮಶಾನಕ್ಕೆ 7 ಸೆಂಟ್ಸ್ ಜಾಗವನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಹೆಚ್ಚುವರಿ ಜಾಗ ನೀಡುವಂತೆ ಗ್ರಾಪಂ ಬೇಡಿಕೆ ಇರುವುದರಿಂದ ಅದು ಪೆಂಡಿಂಗ್ ಇದೆ ಎಂದು ಕಲ್ಲಮುಂಡ್ಕೂರು ವಿಎ ದೀಪಿಕಾ ತಿಳಿಸಿದರು. 

ನಿಡ್ಡೋಡಿ ಗ್ರಾಮದಲ್ಲಿ ವಿಎ ಕಚೇರಿ ನಿರ್ಮಾಣಕ್ಕೆ ಮಂಜೂರಾದ ಜಾಗ ಅತಿಕ್ರಮಣವಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸುಂದರ್ ಪ್ರಶ್ನಿಸಿದರು. ಜಾಗ ಅತಿಕ್ರಮಣದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ವಿಎ ಅನಿಲ್ ಕುಮಾರ್ ತಿಳಿಸಿದರು. 

ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಗ್ರಾಮಸಭೆಯಲ್ಲಿ ನಿರ್ಣಯವಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು, ಪಂಚಾಯತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪಂಚಾಯತ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ ಭರವಸೆಯಿತ್ತರು.


ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಪ್ರವೀಣ್ ನೋಡೆಲ್ ಅಧಿಕಾರಿಯಾಗಿದ್ದರು. 

ಉಪಾಧ್ಯಕ್ಷೆ ವಿದ್ಯಾಲತಾ, ಪಿಡಿಒ ಪ್ರಶಾಂತ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು.

Post a Comment

0 Comments