ಸವಾಲುಗಳನ್ನು ಎದುರಿಸಿ ಆತ್ಮ ಸ್ಥೈರ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ : ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್
ಮೂಡುಬಿದಿರೆ: ಪದವಿ ಪೂರೈಸುವುದು ಅಥವಾ ಕಂಠಪಾಠ ಮಾಡಿ ರ‍್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್ ಹೇಳಿದರು.
ಮಂಗಳೂರು ವಿವಿ ಘಟಕ ಕಾಲೇಜು ಬನ್ನಡ್ಕ ಇಲ್ಲಿ ಶನಿವಾರ ಪ್ರೇರಣಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಭವಿಷ್ಯದ ನೌಕಕರಾಗಬಾರದು. ರಾಷ್ಟ್ರನಿರ್ಮಾಣದಲ್ಲಿ ನೀವು ಪಾಲುದಾರರಾಗಬೇಕು. ಶಿಕ್ಷಣ ಸಾಮಾಜಿಕ ಜವಬ್ದಾರಿಯನ್ನು ಮೂಡಿಸಬೇಕು.ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರಲ್ಲೂ ಇಂತಹ ಮನೋಭಾವ ಇರಬೇಕು ಈ ಮೂಲಕ ನಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು. ಶಹಜಾನ್ ಆಗ್ರಾದಲ್ಲಿ ತಾಜ್‌ಮಹಾಲ್ ಕಟ್ಟುವ ಮೊದಲು ಅದನ್ನು ತನ್ನ ಮನಸ್ಸಿನಲ್ಲಿ ಕಟ್ಟಿದ್ದ. ಹಾಗೇನೆ ನಾವು ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕುವ ಮೊದಲು ಅದನ್ನು ನಮ್ಮ ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಳ್ಳಬೇಕು. ನಂತರ ಅದನ್ನು ಅನುಷ್ಠಾನಗೊಳಿಸಬೇಕು. ವಿದ್ಯೆಯ ಜತೆಗೆ ಒಳ್ಳೆಯ ಬುದ್ದಿ, ಸಂಸ್ಕಾರವನ್ನು ಮಕ್ಕಳಿಗೆ ಕಳಿಸಿ. ಹೆತ್ತವರಲ್ಲೂ ಕೂಡ ಸಂಸ್ಕಾರ ಇರಬೇಕು ಎಂದರು.
ಇದೀಗ ಬನ್ನಡ್ಕ ಕಾಲೇಜು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಯಾಗುತ್ತದೆ. `ಈ ಕಾಲೇಜಿನಲ್ಲಿ ಓದಿದ ನಾನು ಬದುಕಿನಲ್ಲಿ ಇಷ್ಟು ಎತ್ತರಕ್ಕೆ ಏರಿದೆ' ಎಂದು ಭವಿಷ್ಯದಲ್ಲಿ ಹೆಮ್ಮೆಯಿಂದ ಹೇಳುವ ವ್ಯಕ್ತಿಗಳು ಸಿಗುತ್ತಾರೆ ಎಂದು ಕಾಲೇಜಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ೨೦೨೧ರಲ್ಲಿ ಪ್ರಾರಂಭವಾದ ಬನ್ನಡ್ಕ ಘಟಕ ಕಾಲೇಜು ಮಂಗಳೂರು ವಿವಿಯ ಕಠಿಣ ನಿಯಮಗಳಿಂದಾಗಿ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳನ್ನು ರದ್ದುಪಡಿಲಾಗಿದೆ. ಕಾಲೇಜನ್ನು ಮುಚ್ಚಲಾಗುತ್ತದೆ ಎಂಬ ಅಪಪ್ರಚಾರವು ಕೇಳಿಬರುತ್ತಿದೆ. ನನ್ನ ಕನಸಿನ ಯೋಜನೆಯ ಈ ಕಾಲೇಜು ಯಾವುದೇ ಕಾರಣಕ್ಕು ಮುಚ್ಚಬಾರದು ಎಂದು ರಾಜ್ಯಪಾಲರು ಮತ್ತು ವಿವಿ ಕುಲಪತಿಗಳನ್ನು ಅವರು ಆಗ್ರಹಿಸಿದರು.
ಮಂಗಳೂರು ವಿವಿ ಉಪಕುಲಪತಿ ಪ್ರೊ.ಎಸ್.ಎಲ್ ಧರ್ಮ ಮಾತನಾಡಿ ಬನ್ನಡ್ಕದ ಘಟಕ ಕಾಲೇಜು ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಕಾಲೇಜು ಮುಚ್ಚಿಸಲು ನಾನು ಕುಲಪತಿಯಾಗಿ ಬಂದಿಲ್ಲ. ಯಾವುದೇ ಕಾರಣಕ್ಕೂ ನಾನು ಕಾಲೇಜನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಸರಕಾರದ ನಿಯಮವನ್ನು ಪಾಲಿಸಬೇಕಾಗಿದೆಯಷ್ಟೆ. ಬನ್ನಡ್ಕ ಕಾಲೇಜನ್ನು ಸರಕಾರದ ಸುಪರ್ದಿಗೆ ಪಡೆಯುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ದರ್ಶನ್ ಹೆ.ವಿ., ತಹಶಿಲ್ದಾರ್ ಶ್ರೀಧರ್ ಮುಂದಲಮನಿ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.
ಕಾಲೇಜಿನ ಸಂಯೋಜಕರಾದ ಕುಮಾರ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಆಶಾ ಶಾಲೆಟ್ ಡಿಸೋಜಾ ನಿರೂಪಿಸಿದರು. ಸುಧಾಕರ ವಂದಿಸಿದರು.
0 Comments