ನಿಡ್ಡೋಡಿ ಬಂಗೇರಪದವು ಗಣಿಗಾರಿಕೆ ವಾಹನಗಳಿಗೆ ಗ್ರಾಮಸ್ಥರ ವಿರೋಧ : ಪ್ರತಿಭಟನೆ
ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲತ್ತಾರು ಪದವು ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ತೆಗೆದ ಮಣ್ಣು ಹೊತ್ತ ಬೃಹತ್ ಗಾತ್ರದ ವಾಹನಗಳು ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಬಂಗೇರಪದವು ಮೂಲಕ ಸಾಗುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಬಂಗೇರಪದವುನಲ್ಲಿ ಜಮಾವಣೆಗೊಂಡ ಗ್ರಾಮಸ್ಥರು ಈ ಪ್ರದೇಶದಲ್ಲಿ ಸಾಗುತ್ತಿರುವ ಬೃಹತ್ ಗಾತ್ರದ ವಾಹನಗಳಿಂದಾಗಿ ರಸ್ತೆ ಹಾಳಾಗುತ್ತಿದೆ ಮತ್ತು ಜನರ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದು ಆಕ್ಷೇಪಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ, ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ಮಾಜಿ ಸದಸ್ಯ ಸತೀಶ್ ಅಮೀನ್, ಪ್ರಮುಖರಾದ ಈಶ್ವರ ಕಟೀಲ್, ಪಂಚಾಯತ್ ಸದಸ್ಯರಾದ ಜನಾರ್ಧನ, ಗಿರೀಶ್‌ರವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ,ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಘನ ವಾಹನಗಳ ಸಂಚಾರಕ್ಕೆ ತಡೆ ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಮೂಡುಬಿದಿರೆ ಕಂದಾಯ ನಿರೀಕ್ಷಕ ಮಂಜುನಾಥ್, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಬಗ್ಗೆ ಈಗಾಗಲೇ ಹಲವಾರು ತಿಂಗಳಿಂದ ಜನರ ವಿರೋಧ ಕಂಡುಬಂದಿದ್ದು ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ಮಣ್ಣು ಸಹಿತ ಗಣಿಗಾರಿಕೆಯ ಸೊತ್ತುಗಳನ್ನು ಹೊತ್ತೊಯ್ಯುತ್ತಿರುವ ಘನ ವಾಹನಗಳ ಸಂಚಾರ ಪ್ರದೇಶದಲ್ಲಿ ತಡೆಯಾಗುವ ರೀತಿಯಲ್ಲಿ ಮುಖ್ಯ ರಸ್ತೆಯ ನೀರು ಸಾಗುವ ಕಣಿಯನ್ನು ಪಂಚಾಯತ್ ಜೇಸಿಬಿ ಮೂಲಕ ತೆರೆದು ಪ್ರತಿಭಟನಕಾರರಿಗೆ ತಾತ್ಕಾಲಿಕ ಪರಿಹಾರ ಒದಗಿಸಿದೆ.
0 Comments