ಕೆಎಂಎಫ್ ಬಂಡಾಯ ಅಭ್ಯಥಿ೯ ಸುಚರಿತ ಶೆಟ್ಟಿಗೆ ಬಿಜೆಪಿಯ ಬೆಂಬಲವಿಲ್ಲ : ಶಾಸಕ ಕೋಟ್ಯಾನ್
ಮೂಡುಬಿದಿರೆ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಈ ಬಾರಿ ಪಕ್ಷವು ಹೊಸಬರಿಗೆ ಅವಕಾಶ ಕೊಟ್ಟಿದೆ ಇದರಿಂದಾಗಿ ಜಿಲ್ಲಾ ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರಿಗೆ ಬಿಜೆಪಿಯಾಗಲಿ, ಸಹಕಾರ ಭಾರತಿಯಾಗಲಿ ಬೆಂಬಲ ನೀಡುವುದಿಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಅವರು ಬುಧವಾರ ವಿದ್ಯಾಗಿರಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೆಎಂಎಫ್ ನಿರ್ದೇಶಕರ ಚುನಾವಣೆಗೆ ಮಂಗಳೂರು ಉಪವಿಭಾಗದಿಂದ ಬಿಜೆಪಿ ಮತ್ತು ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಯಾಗಿ ಸುಧಾಕರ ರೈ, ಸುದೀಪ್ ಅಮೀನ್, ಸುಭದ್ರಾ ಎನ್.ರಾವ್ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ ಎನ್. ಶೆಟ್ಟಿ ಸ್ಪರ್ಧಿಸಲಿದ್ದಾರೆ. ಇವರ ಗೆಲುವಿಗೆ ನಾವು ಶ್ರಮಿಸಲಿದ್ದೇವೆ ಎಂದರು.
ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದ ಸುಚರಿತ ಶೆಟ್ಟಿ ಬಿಜೆಪಿ ಬೆಂಬಲದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಸದಸ್ಯರಾಗಿ, ಹಾಗೂ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಪಕ್ಷ ಅವಕಾಶ ಕೊಟ್ಟಿದೆ. ಮಾತ್ರವಲ್ಲ ಅವರ ಪತ್ನಿ ಸುನೀತಾ ಸುಚರಿತ ಶೆಟ್ಟಿ ಅವರಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಿದ್ದೇವೆ. ಸುಚರಿತ ಶೆಟ್ಟಿ ಅವರು ಮೂರು ಬಾರಿ ಜಿಲ್ಲಾ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದಲ್ಲಿ ಅವರಿಗೆ ಎಲ್ಲಾ ರೀತಿಯ ಅವಕಾಶ, ಸ್ಥಾನಮಾನಗಳನ್ನು ಕೊಟ್ಟಿದೆ. ಈ ಮಧ್ಯೆ ಸುಚರಿತ ಶೆಟ್ಟಿ ಯಾರ್ಯಾರದ್ದೋ ಮಾತು ಕೇಳಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಸರಿಯಲ್ಲ. ಪಕ್ಷದ ಶಿಸ್ತನ್ನು ಅವರು ಉಲ್ಲಂಘಿಸಿದ್ದಾರೆ. ಸಧ್ಯ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೂ ಮುಂದೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಬಹುದು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾಯ೯ದಶಿ೯ಗಳಾದ ಹರಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸದ್ ಹೆಗ್ಡೆ, ಎಸ್ ಸಿ ಮೋಚಾ೯ ಜಿಲ್ಲಾ ಅಧ್ಯಕ್ಷ ಜಗನ್ನಾಥ, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ, ಪಕ್ಷದ ಪ್ರಮುಖರಾದ ಈಶ್ವರ್ ಕಟೀಲು ಈ ಸಂದಭ೯ದಲ್ಲಿದ್ದರು.
0 Comments