ಅಳಿಯೂರು: ಪ್ರಶಸ್ತಿ ವಿಜೇತ ಶಿಕ್ಷಕಿಯರಿಗೆ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರು: ಪ್ರಶಸ್ತಿ ವಿಜೇತ ಶಿಕ್ಷಕಿಯರಿಗೆ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ 

ಮೂಡುಬಿದಿರೆ : ಅಳಿಯೂರು ಸರಕಾರಿ ಪ್ರೌಢಶಾಲಾ ವತಿಯಿಂದ ಪ್ರಶಸ್ತಿ ವಿಜೇತ ಇಬ್ಬರು ಶಿಕ್ಷಕಿಯರು ಮತ್ತು ಕಳೆದ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಗುರುವಾರ ನಡೆಯಿತು. 

ಶಾಸಕ ಉಮಾನಾಥ ಎ.ಕೋಟ್ಯಾನ್ ಪ್ರಶಸ್ತಿ ವಿಜೇತ ಶಿಕ್ಷಕರು,ಉತ್ತಮ ಅಂಕ ಪಡೆದ ವಿದ್ಯಾರ್ಥಿ ಗಳನ್ನು ಅಭಿನಂದಿಸಿ ಮಾತನಾಡಿ ‘ಪ್ರತಿಭೆ ಎನ್ನುವುದು ತಾಯ ಹೊಟ್ಟೆಯಿಂದ ಹೊರಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಇದೆ, ಅದನ್ನು ಗುರುತಿಸಿ ಹೊರತರುವ ಪ್ರಯತ್ನವನ್ನು ಮೊದಲಿಗೆ ಆತ ಅಥವಾ ಆಕೆಯೇ ಮಾಡಬೇಕು, ಬಳಿಕ ಶಿಕ್ಷಕರು ಹಾಗೂ ಪೋಷಕರು ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು.


ನನ್ನ ಜೀವನದಲ್ಲಿ ಮೂವರು ಶಿಕ್ಷಕಿಯರನ್ನು ನಾನು ಶಾಸಕ ಅಲ್ಲ,ಇನ್ನೂ ಎತ್ತರಕ್ಕೆ ಹೋದರೂ ಮರೆಯುವ ಹಾಗಿಲ್ಲ, ಊಟಕ್ಕಿಲ್ಲದ ಆ ದಿನಗಳಲ್ಲಿ ನನಗೆ ಮನೆಗೆ ಕರೆದುಕೊಂಡು ಹೋಗಿ ಪಕ್ಕದಲ್ಲೇ ಕುಳಿತು ಊಟ ಬಡಿಸುತ್ತಿದ್ದ ಮೋಂತಿ ಟೀಚರ್ ಪ್ರೀತಿ ತೋರಿಸಿರುವ ಬಗ್ಗೆ ನೆನಪಿಸಿದರು.

ಸರಕಾರಿ ಶಾಲೆ, ಕಾಲೇಜು ಎಂದರೆ ಯಾರಿಗೂ ತಾತ್ಸಾರ ಬೇಡ,ಈಗ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲ ಸೌಲಭ್ಯಗಳನ್ನೂ ನೀಡುತ್ತಿದೆ,ನೀವೆಲ್ಲಾ ಭಾಗ್ಯಶಾಲಿಗಳೆಂದು ವಿದ್ಯಾರ್ಥಿಗಳಿಗೆ ಹೇಳಿದ ಅವರು ಇದನ್ನೆಲ್ಲಾ ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕೆಂದರು.


ಎಷ್ಟೇ ಎತ್ತರಕ್ಕೇರಿದರೂ ಕಲಿತ ಶಾಲೆ, ಕಲಿಸಿದ ಶಿಕ್ಷಕರು ,ಬೆಳೆದ ಪರಿಸರ ಮತ್ತು ಕಷ್ಟಪಟ್ಟು ಓದಿಸಿದ ಹೆತ್ತವರನ್ನು ಯಾವ ಕಾಲಕ್ಕೂ ಮರೆಯಬಾರದೆಂದು ಹೇಳಿದರು.

 ಈ ಭಾಗದ ಜನರ  ಬಹುಕಾಲದ ಬೇಡಿಕೆಯ ಪರಿಣಾಮವಾಗಿ ಅಳಿಯೂರಿಗೆ ಪದವಿ ಪೂರ್ವ ಕಾಲೇಜು ಹಾಗೂ ಬನ್ನಡ್ಕಕ್ಕೆ ಪದವಿ ಕಾಲೇಜನ್ನು ಬಹಳಷ್ಟು ಶ್ರಮಪಟ್ಟು ತಂದಿದ್ದೇನೆ, ಇದನ್ನು ಈ ಭಾಗದವರು ಅರ್ಥ ಮಾಡಿಕೊಳ್ಳಬೇಕು, ಸರಕಾರಿ ಕಾಲೇಜಿನಲ್ಲಿ ಉತ್ತಮ ವಿದ್ಯಭ್ಯಾಸ ನೀಡಲಾಗುತ್ತಿದೆಯಾದರೂ ಕೆಲವರು ದೂರದ ಖಾಸಗಿ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ.  ಕೆಲವು ವಿದ್ಯಾರ್ಥಿಗಳಿಗೆ ಅದರಿಂದ ಪೇಟೆ ತಿರುಗುವ ಉದ್ದೇಶವೂ ಇದೆ, ಶಿಕ್ಷಣ ಎಲ್ಲಾ ಕಡೆ ಒಂದೇ ಎಂದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಸಂದೀಪ್ ನಾಯಕ್ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ರೇಖಾ ಜತನ್ನ ,ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಶ್ರೀಧರ ಬಂಗೇರ, ಗಣೇಶ್ ಬಿ.ಅಳಿಯೂರು, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಪ್ರದೀಪ್ ಕುಮಾರ್, ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಆದಿರಾಜ ಜೈನ್, ಸುನಿಲ್ ಪಣಪಿಲ ,ವಸಂತ ಪೂಜಾರಿ,ಸುಕುಮಾರ್ ಜೈನ್, ಪ್ರವೀಣ್ ಪೂಜಾರಿ, ಲಕ್ಷ್ಮಣ ಸುವರ್ಣ, ದೀಕ್ಷಿತ್, ಬಶೀರ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಾದ ಸುಬ್ರಹ್ಮಣ್ಯ ಅವರು ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಚಿನ್ಮಯಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಮೂಡುಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕಿಯರಾದ ರೇಖಾ, ಮಂಜುಳಾ, ಪದ್ಮಿನಿ, ರಂಜನ, ಆ್ಯನಿ ಕ್ರಾಸ್ತಲಿನೊ, ಮನಿತಾ, ತೇಜಶ್ರೀ, ಸವಿತಾ, ಅಲ್ಫಿಯಾ, ನಿರ್ಮಲಾ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು

Post a Comment

0 Comments